
ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆಗೊಳಿಸಿದ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರು
ಉಳ್ಳಾಲ: ಉಳ್ಳಾಲದ ಮಣ್ಣಿನಲ್ಲಿ ನಾವು ಖುಷಿಯಿಂದ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರುವುದು ವೀರರಾಣಿ ಅಬ್ಬಕ್ಕ ಕಾರಣ. ತಾಯಿ ಭಗವತಿ ಅವರ ಪೂರ್ಣ ಅನುಗ್ರಹ ಎಲ್ಲರ ಮೇಲೂ ಇರಲಿ. ಈ ಬಾರಿ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಅಬ್ಬಕ್ಕ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿರುವುದು ವಿಶೇಷ. ಉತ್ಸವದ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಎಲ್ಲರಿಗೂ ಸುಖ, ಶಾಂತಿ ಹಾಗೂ ಯಶಸ್ಸು ದೊರಕಲಿ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಆಶೀರ್ವದಿಸಿದರು.
ತೊಕ್ಕೊಟ್ಟಿನ ಅಂಬೇಡ್ಕರ್ ಭವನದಲ್ಲಿ ಫೆ.೧೪ ರಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವ 2025–26ರ ಕುತ್ತಾರು ಖಾಸಗಿ ಹೊಟೇಲಿನಲ್ಲಿ ಜರಗಿದ
ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕರು ಹಾಗೂ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಮಾತನಾಡಿ, “1920ರಲ್ಲಿ ನಡೆದ ಗಾಂಧೀಜಿ ಹೋರಾಟಕ್ಕೂ ಮುನ್ನವೇ ವೀರರಾಣಿ ಅಬ್ಬಕ್ಕಳು ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿದ್ದರು. ಅಬ್ಬಕ್ಕಳ ಕಾಲದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತರು ಎಲ್ಲರೂ ಸಮಾನವಾಗಿ ಒಗ್ಗಟ್ಟಿನಿಂದ ಬದುಕಿದ್ದರು. ಅದು ಉಳ್ಳಾಲದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಉತ್ಸವಕ್ಕೆ ಸಂಬಂಧಿಸಿದಂತೆ ₹25 ಲಕ್ಷ ಅನುದಾನ ಮಂಜೂರು ಮಾಡುವ ಪ್ರಸ್ತಾವನೆ ಇದ್ದರೂ, ಜಿಲ್ಲಾಧಿಕಾರಿಗಳ ಬಳಿ ೧೫ ದಿನಗಳ ಹಿಂದೆ ಭೇಟಿ ಮಾಡಿದಾಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಲ್ಲಿ ಕೇಳುವಂತೆ ಸೂಚಿಸಿದ್ದಾರೆ. ಆದರೆ ಹಲವು ವರ್ಷಗಳಿಂದ ಇದೇ ಅನುದಾನಕ್ಕೆ ತಡೆ ಮುಂದುವರಿಯುತ್ತಿದೆ. ಇತ್ತೀಚೆಗೆ ನಿಧನರಾದ ವಿನಯ್ ಹೆಗ್ಡೆ ಅವರೂ ಅಬ್ಬಕ್ಕ ಉತ್ಸವಕ್ಕೆ ಸಹಕಾರವನ್ನು ನೀಡುತ್ತಾ ಬಂದಿದ್ದು, ಅಂತಹ ಉತ್ತಮ ಮನಸ್ಸಿನ ಔದಾರ್ಯದಿಂದ ಉತ್ಸವ ನಡೆಸುವಂತಾಗಿದೆ ಎಂದರು.
ಈ ಸಂದರ್ಭ ಸಮಿತಿ ಉಪಾಧ್ಯಕ್ಷರುಗಳಾದ ದೇವಕಿ ಆರ್ ಉಳ್ಳಾಲ್, ಆಲಿಯಬ್ಬ, ಖಜಾಂಚಿ ಆನಂದ್ ಕೆ.ಅಸೈಗೋಳಿ ಉಪಸ್ಥಿತರಿದ್ದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಧನಲಕ್ಷ್ಮೀ ಗಟ್ಟಿ ನಿರೂಪಿಸಿ ವಂದಿಸಿದರು.
ಫೆ.೧೪ ತೊಕ್ಕೊಟ್ಟು ವಿನಲ್ಲಿ ಉತ್ಸವ
ಫೆ.೧೪ ರಂದು ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವ ೨೦೨೫-೨೬ ರ ಅಧ್ಯಕ್ಷತೆಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಹಿಸಲಿದ್ದು, ಪ್ರಶಸ್ತಿ ಪ್ರಧಾನವನ್ನು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಮ್. ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಪ್ರಧಾನ ಅಭ್ಯಾಗತರಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿನ್ನವತ್ತಳೆ ಪ್ರಧಾನವನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ನೆರವೇರಿಸಲಿದ್ದಾರೆ. ಅಲ್ಲದೆ ಸಮಿತಿಯ ಸ್ವಾಗತಾಧ್ಯಕ್ಷ , ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಇವರ ೮೦ ನೇ ಹುಟ್ಟುಹಬ್ಬದ ವರ್ಷಾಚರಣೆಯ ಪ್ರಯುಕ್ತ ಗೌರವ ಸನ್ಮಾನವೂ ನಡೆಯಲಿದೆ.
ದಿನಕರ್ ಉಳ್ಳಾಲ್
ಅಧ್ಯಕ್ಷರು
ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ