ಉಳ್ಳಾಲ: ಶಿಕ್ಷಕರು ಮಕ್ಕಳಿಗೆ ಕೇವಲ ಪಾಠವನ್ನಷ್ಟೇ ಅಲ್ಲದೆ, ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಬೆಳೆಸುವ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದ್ದಾರೆ. ಅಂಬ್ಲಮೊಗರು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಮಸ್ತ ಸಿಬ್ಬಂದಿ ಪ್ರಾಮಾಣಿಕತೆ, ನಿಷ್ಠೆ ಮತ್ತು ಸೇವಾಭಾವದಿಂದ ನಿರ್ವಹಿಸುತ್ತಿರುವ ಕಾರ್ಯದಿಂದಾಗಿ, ಈ ಶಾಲೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸ್ಥಾನಕ್ಕೆ ಏರುವುದು ನಿಶ್ಚಿತ ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ . ಆರ್ ಈಶ್ವರ್ ಅಭಿಪ್ರಾಯಪಟ್ಟರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬ್ಲಮೊಗರು ಇಲ್ಲಿ ಜರಗಿದ ಶಾಲಾ ಮಕ್ಕಳ ಪ್ರತಿಭಾ ಸಿಂಚನ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಕ್ರಿಯಾಶೀಲರಾಗಿ, ಸಂಸ್ಥೆಯ ಪ್ರಗತಿಗಾಗಿ ಏಕಮನಸ್ಸಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಶಿಕ್ಷಕನಿಗೆ ಆಗುವ ತೊಂದರೆಯನ್ನೂ ಸಹ ನ್ಯಾಯಯುತವಾಗಿ, ಸಮಯಕ್ಕೆ ಸರಿಯಾಗಿ ಪರಿಹರಿಸುವಂತಹ ಮಾನವೀಯ ವ್ಯಕ್ತಿತ್ವದ ಮುಖ್ಯೋಪಾಧ್ಯಾಯರು ಶಾಲೆಗೆ ದಿಕ್ಕು ತೋರಿಸುತ್ತಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಅವರ ಪ್ರೇರಣಾದಾಯಕ ಮಾತುಗಳನ್ನು ಪ್ರೇರಣೆಯಾಗಿಸಿದ ಅಂಬ್ಲಮೊಗರು ಶಾಲೆಯ ವಿದ್ಯಾರ್ಥಿನಿ ಹನ್ನತ್ ಮತ್ತು ಕೊಣಾಜೆ ಶಾಲೆಯ ನಿಶಾ ಅವರನ್ನು ತಾಲೂಕು ಮಟಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ಹಿನ್ನೆಲೆಯಲ್ಲಿ ರೂ.50,000 ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಂಚಭಾಗ್ಯ ಯೋಜನೆ ಅನುಷ್ಠಾನ ಸಮಿತಿ ಉಳ್ಳಾಲ ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ರಫೀಕ್ ಮಾತನಾಡಿ, ಮನುಷ್ಯನು ನಿಜವಾದ ಮನುಷ್ಯನಾಗಲು, ವೇದಿಕೆಯಲ್ಲಿ ನಿಂತು ಆತ್ಮವಿಶ್ವಾಸದಿಂದ ಮಾತನಾಡಲು ಶಿಕ್ಷಕರೇ ಪ್ರಮುಖ ಕಾರಣರಾಗಿರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಧೈರ್ಯವನ್ನು ಮಕ್ಕಳಿಗೆ ನೀಡುವುದು ಶಾಲೆಯ ಸಕಾರಾತ್ಮಕ ವಾತಾವರಣವೇ. ಇಂದಿಗೂ ಕೆಲವರ ಮನಸ್ಸಿನಲ್ಲಿ ‘ಸರ್ಕಾರಿ ಶಾಲೆ ಅಂದರೆ ಶಾಲೆಯೇ ಅಲ್ಲ’ ಎಂಬ ತಪ್ಪು ಕಲ್ಪನೆ ಇದೆ. ಆದರೆ ಅಂಬ್ಲಮೊಗರುವಿನ ಸರ್ಕಾರಿ ಶಾಲೆ ಈ ಭ್ರಮೆಯನ್ನು ಮುರಿದಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯರಾದ ಜಗದೀಶ್ ಶೆಟ್ಟಿ ಅವರಂತಹ ಸಮರ್ಪಿತ ಶಿಕ್ಷಕರ ನೇತೃತ್ವ ಈ ಶಾಲೆಗೆ ಹೆಮ್ಮೆಯಾಗಿದೆ. ಶತಮಾನೋತ್ಸವದ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ನೀಡಿದ ದೇಣಿಗೆಯ ಫಲವಾಗಿ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ, ಸೌಲಭ್ಯಗಳ ದೃಷ್ಟಿಯಿಂದಲೂ ಎಷ್ಟೊಂದು ಪ್ರಗತಿ ಸಾಧಿಸಿದ್ದಾರೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.ಇದು ಸರ್ಕಾರಿ ಶಾಲೆಗಳ ಶಕ್ತಿಯನ್ನೂ, ಶಿಕ್ಷಕರ ಬದ್ಧತೆಯನ್ನೂ ಪ್ರತಿಬಿಂಬಿಸುವ ಜೀವಂತ ಉದಾಹರಣೆ ಎಂದರು.
ಅಂಬ್ಲಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ಸುಭೋಧ್ ಶೆಟ್ಟಿ, ಅಂಬ್ಲಮೊಗರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿಠಲ ಶೆಟ್ಟಿ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣರಾವ್ ಟಿ ಡಿ, , ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬುಸಾಲಿ, ಮುನ್ನೂರು ಸಿ ಆರ್ ಪಿ ರೆಹನಾ , ಪದವಿಪೂರ್ವ ಹೆಣ್ಣು ಮಕ್ಕಳ ಕಾಲೇಜು ದೇರಳಕಟ್ಟೆ ಇಲ್ಲಿನ ಉಪನ್ಯಾಸಕ ಮಂಜುನಾಥ್, ಸರಕಾರಿ ಪ್ರೌಢಶಾಲೆ ಅಂಬ್ಲಮೊಗರು ಮುಖ್ಯ ಶಿಕ್ಷಕ ನಾಗರಾಜ್, ಮುನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಪ್ರಮೀಳಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ ಶೆಟ್ಟಿ ಎ ಸ್ವಾಗತಿಸಿದರು , ನಳಿನಾಕ್ಷಿ ನಿರೂಪಿಸಿದರು. ಗೀತಾ ಕೆ ಮತ್ತು ವಿದ್ಯಾ ವಂದಿಸಿದರು. ಶ್ವೇತಾ ಎಂ ಪೈ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.
ಈ ಸಂದರ್ಭ ಶಿಕ್ಷಣಾಧಿಕಾರಿ ಹೆಚ್. ಆರ್ ಈಶ್ವರ್ ಮತ್ತು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ಜಗದೀಶ ಶೆಟ್ಟಿ ಎ. ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ʻಮುಂದಿನ ವರ್ಷ ಎಲ್ ಕೆಜಿ ಆರಂಭ
30 ಮಂದಿ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶʼ
11ಮಂದಿ ಶಿಕ್ಷಕರ ಅಕ್ಷಯ ಶ್ರಮ ಹಾಗೂ ಸಮರ್ಪಿತ ಸೇವೆಯಿಂದ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ತರಗತಿಯನ್ನು ಆರಂಭಿಸಲಾಗುತ್ತಿದೆ. ಈ ತರಗತಿಗೆ ಕೇವಲ ೩೦ ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಪೋಷಕರು ಸಾಧ್ಯವಾದಷ್ಟು ಬೇಗ ತಮ್ಮ ಮಕ್ಕಳ ನೋಂದಾವಣೆಯನ್ನು ಪೂರ್ಣಗೊಳಿಸುವಂತೆ ವಿನಂತಿ. ಶಾಲೆಯಲ್ಲಿ 1ರಿಂದ 10ನೇ ತರಗತಿಯವರೆಗೆ ಎಲ್ಲಾ ತರಗತಿಗಳಿಗೂ ಸುಸಜ್ಜಿತ ಮೂಲಸೌಕರ್ಯ, ಶಿಸ್ತಿನ ಕಲಿಕಾ ವಾತಾವರಣ ಹಾಗೂ ಅನುಭವಸಂಪನ್ನ ಶಿಕ್ಷಕರ ಮಾರ್ಗದರ್ಶನ ಲಭ್ಯವಿದೆ. ಗೌರವಾನ್ವಿತ ಇತಿಹಾಸವನ್ನು ಹೊಂದಿರುವ ಈ ಶಾಲೆ, 101 ವರ್ಷಗಳ ಕಾಲ ನಿರಂತರವಾಗಿ ಶಾಲಾ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ, ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂಬುದು ಎಲ್ಲರ ಆಶಯ.
ಜಗದೀಶ್ ಶೆಟ್ಟಿ ಎ
ಶಾಲಾ ಮುಖ್ಯೋಪಾಧ್ಯಾಯರು