Site icon Ullalavani

ಸೇವಾಂಜಲಿ ಪ್ರತಿಷ್ಠಾನ – ನಿಟ್ಟೆ ವಿವಿ ಸಹಭಾಗಿತ್ವದಲ್ಲಿ ದಕ್ಷಿಣ ಭಾರತದ ಮೊದಲ RuTAGe ಸ್ಮಾರ್ಟ್ ವಿಲೇಜ್ ಸೆಂಟರ್ ಕಾರ್ಯಾರಂಭ

ನಿಟ್ಟೆ ಡೀಮ್ಡ್ ಯುನಿವರ್ಸಿಟಿ, ಸೆಕ್ಷನ್ ಇನ್ಫಿನ್- 8 ಹಾಗೂ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧಿಗೆ ಬೇಕಾದ ತಂತ್ರಜ್ಞಾನವನ್ನು ಒದಗಿಸುವ ಉದ್ದೇಶದಿಂದ RuTAGe ಸ್ಮಾರ್ಟ್ ವಿಲೇಜ್ ಸೆಂಟರ್‌ನ್ನು ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಬುಧವಾರ ಶುಭಾರಂಭಗೊಳಿಸಲಾಯಿತು.



ಕಾರ್ಯಕ್ರಮದಲ್ಲಿ ನಿಟ್ಟೆ ಡೀಮ್ಡ್ ಯುನಿವರ್ಸಿಟಿ ಯ ಸಂಶೋಧನೆ ಮತ್ತು ಪೇಟೆಂಟ್ಸ್ ಸಲಹೆಗಾರರಾದ ಡಾ. ಇಡ್ಯಾ ಕರುಣಸಾಗರ್ ಅವರು RuTAGe ಸಮರ್ಥ ಗ್ರಾಮ ಕೇಂದ್ರ ಯೋಜನೆಯ ವಿವರವಾದ ರೂಪುರೇಷೆ, ಉದ್ದೇಶ ಮತ್ತು ಕಾರ್ಯವಿಧಾನವನ್ನು ಪ್ರಸ್ತುತಪಡಿಸಿದರು. ಗ್ರಾಮೀಣ ಪ್ರದೇಶಗಳ ನೈಜ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸಂಶೋಧನೆ ಆಧಾರಿತ ಹಾಗೂ ಅನುಷ್ಠಾನಗೊಳ್ಳುವ ತಾಂತ್ರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಅವರು ವಿವರಿಸಿದರು.


U.S.A ಯ ACM ಬಿಸಿನೆಸ್ ಸೊಲ್ಯುಷನ್‌ನ ಮುಖ್ಯಸ್ಥರಾದ ಡಾ. ಎನ್. ಸಿ. ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮೀಣ ಭಾಗದ ಜನರ ಅಭಿವೃದ್ದಿಯ ಉದ್ದೇಶದಿಂದ ಈ ಯೋಜನೆಯನ್ನು ಇಲ್ಲಿ ಆರಂಭಿಸುತ್ತಿದ್ದು ಎಲ್ಲರ ಸಹಕಾರ ಖುಷಿ ನೀಡಿದೆ ಎಂದರು. U.S.A ಯ ಕುಟುಂಬ ವೈದ್ಯ ಡಾ. ಜೀವನ್ ಪ್ರಕಾಶಿನಿ ಮೂರ್ತಿ ಮಾತನಾಡಿ ನಾನು ಈ ಊರಿನಲ್ಲಿಯೇ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಪಡೆದು 40 ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ನಮ್ಮ ಊರು, ನಮ್ಮ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ ಎಂದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಕಾರ್ಯತಂತ್ರ ಒಕ್ಕೂಟದ ನಿರ್ದೇಶಕಿ ಡಾ. ಸಪ್ನ ಪೋತಿ ಅವರು RuTAGe ಸ್ಮಾರ್ಟ್ ವಿಲೇಜ್ ಸೆಂಟರ್‌ನ ಉದ್ದೇಶ ಹಾಗೂ ಕಾರ್ಯವಿಧಾನ ಕುರಿತು ಮಾಹಿತಿ ನೀಡಿದರು. ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಉಪಾಧ್ಯಕ್ಷ ಡಾ. ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ವಜ್ರನಾಭ ಶೆಟ್ಟಿ, ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, Section infin-8 ನಿರ್ದೇಶಕ ಯು.ಎಸ್. ವಿಶ್ವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ನಿವೃತ್ತ ಅಬಕಾರಿ ಅಧಿಕಾರಿ ಎಂ.ಆರ್. ನಾಯರ್ ಹಾಜರಿದ್ದರು,


ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಅನಿಸಿಕೆ ವ್ಯಕ್ತ ಪಡಿಸಿದರು. ಅರ್ಜುನ್ ಕೆ. ಪೂಂಜಾ ಸ್ವಾಗತಿಸಿದರು. ಶಿವಕಿರಣ್ ವಂದಿಸಿದರು. ಡಾ. ಇಂದ್ರಾಣಿ ಕರುಣಾಸಾಗರ್ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಭಾರತದಲ್ಲಿಯೇ ಮೊದಲ ಭಾರಿಗೆ ಯೋಜನೆ ನಿಟ್ಟೆ ವಿವಿಯ ಮೂಲಕ ಫರಂಗಿಪೇಟೆಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು ಸೇವಾಂಜಲಿ ಪ್ರತಿಷ್ಠಾನದ ಕಟ್ಟಡದಲ್ಲಿ ಕಚೇರಿಯನ್ನು ಉದ್ಘಾಟಿಸಲಾಯಿತು.

Exit mobile version