Site icon Ullalavani

ರಿಯಲ್ ಎಸ್ಟೇಟ್ ಉದ್ಯಮಿ ಬಲಿ; ವಾರದಂತರದಲ್ಲಿ ಹೃದಯ ಆಘಾತದಿಂದ ಬಾವ ,ಬಾಮೈದ ಸಾವು…!


ಉಳ್ಳಾಲ: ಜ-21:ಕೃಷಿಕರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸೋಮೇಶ್ವರ ಗ್ರಾಮದ ಪಿಲಾರು ದೇಲಂತ ಬೆಟ್ಟು ನಿವಾಸಿ ರಘುರಾಮ ಶೆಟ್ಟಿ (50)ಯವರು ಮಂಗಳವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಹಠತ್ತನೆ ಸಾವನ್ನಪ್ಪಿದ್ದಾರೆ.

ಮಂಗಳವಾರ ಬೆಳಿಗ್ಗೆ ಲವಲವಿಕೆಯಿಂದಲೇ ಪುತ್ರನನ್ನ ಶಾಲೆಗೆ ಬಿಟ್ಟು ಬಂದು,ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ರಘುರಾಮ್ ಅವರು ದಣಿದ ಕಾರಣ ಮನೆಯೊಳಗೆ ನಿದ್ದೆಗೆ ಜಾರಿದ್ದರು.ಮನೆಗೆ ಬಂದಿದ್ದ ಸಹೋದರಿಯು ರಘುರಾಮ್ ಅವರನ್ನ ಎಬ್ಬಿಸಲು ಹೋದಾಗ ರಘು ಅವರ ದೇಹವು ಪ್ರತಿಕ್ರಿಯಿಸದಿದ್ದಾಗ ವೈದ್ಯರನ್ನ ಕರೆಸಿ ಪರಿಶೀಲಿಸಿದ್ದು,ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಖಚಿತ ಪಡಿಸಿದ್ದಾರೆ.


ಕಳೆದ ವಾರ ಜ.12 ರ ಸೋಮವಾರದಂದು ರಘುರಾಮ್ ಶೆಟ್ಟಿಯವರ ಬಾವ (ಸಹೋದರಿಯ ಪತಿ)ಚಂದ್ರಹಾಸ್ ಶೆಟ್ಟಿ ಅವರು ಶಬರಿ ಮಲೆ ಯಾತ್ರೆಗೆ ತೆರಳಿದ್ದ ವೇಳೆ ಎರಿಮಲೆಯಲ್ಲಿ ಹೃದಯಾಘಾತದಿಂದ‌ ಸಾವನ್ನಪ್ಪಿದ್ದರು.ಮಾರನೇ ದಿನ ಮಂಗಳವಾರದಂದು ಚಂದ್ರಹಾಸ್ ಅವರ ಪಾರ್ಥಿವ ಶರೀರವನ್ನ ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು.ಇದೀಗ ಚಂದ್ರಹಾಸ್ ಅವರ ಬಾಮೈದ ರಘುರಾಮ್ ಅವರು ಮಂಗಳವಾರದಂದೇ ಅಕಾಲಿಕವಾಗಿ ಸಾವನ್ನಪ್ಪಿದ್ದು,ಪಿಲಾರು ದೇಲಂತ ಬೆಟ್ಟುವಿನ ಮನೆಯಲ್ಲಿ ವಾರದಂತರದಲ್ಲೇ ಎರಡು ಸಾವು ಸಂಭವಿಸಿದ್ದು ಕುಟುಂಬಸ್ಥರನ್ನ ದು:ಖದ ಕಡಲಲ್ಲಿ ಮುಳುಗಿಸಿದೆ.


ಮೃತ ರಘುರಾಮ್ ಅವರ ಅಂತ್ಯಕ್ರಿಯೆಯು ಮಂಗಳವಾರ ಸಂಜೆ ಪಿಲಾರು ದೇಲಂತ ಬೆಟ್ಟುವಿನ ಅವರ ಸ್ವಗೃಹದ ಗದ್ದೆಯಲ್ಲಿ ನಡೆಯಿತು.ರಘುರಾಮ್ ಅವರ ಸಹೋದರ ಪುರುಷೋತ್ತಮ ಶೆಟ್ಟಿ ಅವರು ಸೋಮೇಶ್ವರ ಪುರಸಭೆಯ ವಿಪಕ್ಷ ನಾಯಕರಾಗಿದ್ದು,ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಪರ್ಯತ್ತೂರು,ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಮೊದಲಾದ ಗಣ್ಯರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡರು.


ಲಕ್ನೋದ ಕಾರ್ಯಕ್ರಮದಲ್ಲಿರುವ ವಿದಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಅವರು ರಘುರಾಮ್ ಶೆಟ್ಟಿ ಅವರ ಅಕಾಲಿಕ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.


ರಘುರಾಮ್ ಅವರು ಕೃಷಿಕರಲ್ಲದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮನ್ನ ತೊಡಗಿಸಿದ್ದು ಸ್ಥಳೀಯ ಸಾಮಾಜಿಕ,ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ ಸಹಕರಿಸುತ್ತ ಜನಾನುರಾಗಿಯಾಗಿದ್ದರು.
ಮೃತ ರಘುರಾಮ್ ಅವರು ಪತ್ನಿ,ಓರ್ವ ಪುತ್ರ,ಸಹೋದರ,ಸಹೋದರಿಯರನ್ನ ಅಗಲಿದ್ದಾರೆ.

Exit mobile version