Site icon Ullalavani

ಖತರ್ನಾಕ್​​ ಡ್ರಗ್​​ ಜಾಲ ಭೇದಿಸಿದ ಮಂಗಳೂರು ಸಿಸಿಬಿ: ಮಹಿಳೆ ಅರೆಸ್ಟ್​, 4 ಕೋಟಿ ಮೌಲ್ಯದ MDMA ಸೀಜ್​

ಮಂಗಳೂರು, ಜ. 15: ಆರು​ ಪೆಡ್ಲರ್​ಗಳಿಗೆ  ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಜಿಗಣಿ ಬಳಿ ಉಗಾಂಡದ ಮಹಿಳೆ ಜಲಿಯಾ ಝಲ್ವಾಂಗೋ ಅರೆಸ್ಟ್​​ ಮಾಡಲಾಗಿದ್ದು, ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMAಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಕುಂದಾಪುರದ ಮೊಹಮ್ಮದ್ ಶಿಯಾಬ್ ಅಲಿಯಾಸ್​​ ಶಿಯಾಬ್, ಉಳ್ಳಾಲ ಕಳ್ಳರ ಕೋಡಿ ನಿವಾಸಿ ಮೊಹಮ್ಮದ್ ನೌಷದ್ , ಬೆಂಗ್ರೆ ನಿವಾಸಿ ಇಮ್ರಾನ್ ಅಲಿಯಾಸ್​​ ಇಂಬ, ಬಂಟ್ವಾಳದ ನಿಸಾರ್ ಅಹಮ್ಮದ್, ಕಾಪು ನಿವಾಸಿ ಮೊಹಮ್ಮದ್ ಇಕ್ಬಾಲ್ ಮತ್ತು ಪಡುಬಿದ್ರೆ ನಿವಾಸಿ ಶೆಹರಾಜ್ ಶಾರೂಕ್ ಎಂಬ ಡ್ರಗ್ ಪೆಡ್ಲರ್​​ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಜಲಿಯಾಳಿಂದ ಡ್ರಗ್ಸ್ ಪಡೆದು ಮಂಗಳೂರಲ್ಲಿ ಮಾರುತ್ತಿದ್ದ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಲ್ಲಿ ಸಿಸಿಬಿ ರೇಡ್​ ನಡೆಸಿದೆ ಎನ್ನಲಾಗಿದೆ.

ಉಗಾಂಡದ ಜಲಿಯಾ ಯಾರಿಗೂ ಅನುಮಾನ ಬಾರದಂತೆ ಎಂಡಿಎಂ ಸಾಗಾಟಕ್ಕೆ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಳು. ಮಾಲ್‌ಗಳು ಅಥವಾ ಟೆಕ್ಸ್‌ ಟೈಲ್​​ಗಳಿಂದ ಪುರುಷರ ಹೊಸ ಶರ್ಟ್​ಗಳನ್ನು ಖರೀದಿಸಿ ಅದನ್ನು ಮೆಲ್ಲಗೆ ಬಿಡಿಸಿ ಅದರೊಳಗೆ ಅಂದಾಜು 300 ಗ್ರಾಂ ಎಂಡಿಎಂಎ ಪ್ಯಾಕ್ ಇಟ್ಟು ಸೂಟ್ ಕೇಸ್​​ನಲ್ಲಿ ತುಂಬುತ್ತಿದ್ದಳು. ಮೇಲ್ನೋಟಕ್ಕೆ ಇದು ಅಂದವಾಗಿ ಶರ್ಟ್ ಜೋಡಿಸಿಟ್ಟ ಸೂಟ್ ಕೇಸ್​​ನಂತೆ ಕಾಣುತ್ತಿತ್ತು. ಶರ್ಟ್ ಬಿಡಿಸಿ ನೋಡಿದರೆ ಆದರೊಳಗೆ ಎಂಡಿಎಂ ಪ್ಯಾಕೇಟ್​​ಗಳು ಇರುತ್ತಿದ್ದವು. ಇನ್ನು ಜಲಿಯಾ ಉಗಾಂಡದಿಂದ ಬಂದು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದಳು ಎಂಬ ವಿಚಾರವೂ ಬಯಲಾಗಿದೆ. ಆ ಮೂಲಕ ಮಂಗಳೂರಿಗೆ ಸರಬರಾಜಾಗುತ್ತಿದ್ದ ಡ್ರಗ್ಸ್​​ ಜಾಲದ ಒಂದು ಪ್ರಮುಖ ಕೊಂಡಿ ಕಳಚಿದೆ. ಅದರೆ ಇಂತಹ ನುರಾರು ಮಂದಿ ಇರುವ ಅನುಮಾನವಿದ್ದು, ಅವರ ಪತ್ತೆಯನ್ನೂ ಶೀಘ್ರಮಾಡಿ ತಕ್ಕ ಶಾಸ್ತಿ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

Exit mobile version