Site icon Ullalavani

ಆರಿಕ್ಕಾಡಿಯಲ್ಲಿ ಹೊಸ ಟೋಲ್ ಗೇಟ್ ;ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು

ಕುಂಬಳೆ, ಜ. 12 : ರಾಷ್ಟ್ರೀಯ ಹೆದ್ದಾರಿ ಕಾಸರಗೋಡಿನ ಕುಂಬಳೆ ಆರಿಕ್ಕಾಡಿಯಲ್ಲಿ ಹೊಸ ಟೋಲ್ ಗೇಟ್ ವಿರುದ್ಧ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದೆ. ಟೋಲ್ ಶುಲ್ಕ ವಸೂಲಾತಿ ವಿರುದ್ಧದ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನೂರಾರು ಪ್ರತಿಭಟನಾಕಾರರು ಅರಿಕ್ಕಾಡಿ ಟೋಲ್ ಪ್ಲಾಜಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕುಂಬಳೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು. ಇದರಿಂದಾಗಿ ಕಚೇರಿಗೆ ಹೋಗುವ ಸಿಬ್ಬಂದಿ ಮತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು.

ಕೇರಳ-ಕರ್ನಾಟಕ ಗಡಿಯಲ್ಲಿರುವ ತಲಪಾಡಿ ಟೋಲ್ ಗೇಟ್ ನಿಂದ ಕೇವಲ 20 ಕಿ.ಮೀ ದೂರದಲ್ಲಿರುವ ತಾತ್ಕಾಲಿಕ ಪ್ಲಾಜಾದಲ್ಲಿ ಭಾರತೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹವನ್ನು ಪ್ರಾರಂಭಿಸಲು ಯೋಜಿಸಿದ ಮೊದಲ ದಿನವೇ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವದ ಹೋರಾಟ ಸಮಿತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಟೋಲ್ ಪ್ಲಾಜಾಗಳ ನಡುವೆ 60 ಕಿ.ಮೀ ಕಡ್ಡಾಯ ನಿಯಮವನ್ನು NHAI ಪಾಲಿಸಬೇಕೆಂದು ಒತ್ತಾಯಿಸುತ್ತಿದೆ. ಟೋಲ್ ಪ್ಲಾಜಾವನ್ನು ಪೆರಿಯ ಪಂಚಾಯತ್ನ ಚಾಲಿಂಗಲ್ ಗೆ ಸ್ಥಳಾಂತರಿಸದಿದ್ದರೆ ಅಥವಾ ಕನಿಷ್ಠ ತಲಪಾಡಿ ಟೋಲ್ ಗೇಟ್ ಗೆ ಹತ್ತಿರವಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ವಿನಾಯಿತಿ ನೀಡದ ಹೊರತು ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣ ಹೈಕೋರ್ಟ್ ವಿಚಾರಣೆಯಲ್ಲಿದ್ದು, ಇನ್ನೂ ಅಂತಿಮ ತೀರ್ಪು ಹೊರಬರದ ಹಿನ್ನೆಲೆಯಲ್ಲಿ ಶುಲ್ಕ ವಸೂಲಿಗೆ ಮುಂದಾಗಿರುವುದರಿಂದ ಜನರು ಹೋರಾಟ ಆರಂಭಿಸಿದ್ದಾರೆ.

Exit mobile version