ನರಿಂಗಾನ : ಈ ಕಂಬಳ ನಮ್ಮ ದೇಶದ ಆಸ್ತಿ, ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಕಂಬಳ ಸಂಸ್ಕೃತಿಯನ್ನ ಕಾಪಾಡಿ ಕೊಂಡು ಬಂದಿರುವವರಿಂದ ಕಂಬಳದ ಪೋಷಣೆ ಬಹಳ ಕಷ್ಟ ಸಾಧ್ಯ. ಇದರ ಪೋಷಣೆ ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅವರು ಶನಿವಾರ ನರಿಂಗಾನದಲ್ಲಿ 4 ನೇ ವರ್ಷದ ಹೊನಲು ಬೆಳಕಿನ ಲವ- ಕುಶ ಕಂಬಳೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಜಾತಿ ಧರ್ಮ ಮತ ಎಲ್ಲವನ್ನೂ ಮರೆತು ಈ ನಾಡಿನ ಸಂಪತ್ತನ್ನು ಕಾಪಾಡಿಕೊಂಡು ಬರುತ್ತಾ ಇದ್ದೀರಿ. ಹಗಲು ರಾತ್ರಿ ನಡೆಯುವ ಕಂಬಳವನ್ನು ವೀಕ್ಷಿಸಿ, ಪ್ರೋತ್ಸಾಹಿಸುವ ಮೂಲಕ ಉಳಿಸಿ ಬೆಳೆಸಿಕೊಂಡು ಬಂದಿದ್ದೀರಿ ಇದಕ್ಕೆ ನಿಮಗೆಲ್ಲರಿಗೂ ಅಭಿನಂದನೆಗಳು ಸಲ್ಲಬೇಕು ಎಂದರು.
ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಂಬಳ ಓಟ ಕೇವಲ ಮನರಂಜನೆ ಮಾತ್ರವಲ್ಲ ನಮ್ಮ ಕರಾವಳಿಯ ಜಾನಪದೀಯ ಹಾಗೂ ಈ ಮಣ್ಣಿನ ಸೌಹಾರ್ದತೆಯ ಕ್ರೀಡೆಯಾಗಿದೆ.ಈ ಕಂಬಳ ಪರಂಪರೆಯನ್ನು ಉಳಿಸಿ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಸರಕಾರ ವತಿಯಿಂದಲೂ ಕೂಡಾ ಕಂಬಳಕ್ಕೆ ಅನುದಾನ ಒದಗಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ ಎಂದರು.
ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಪ್ರತೀ ಕಂಬಳಕ್ಕೆ ಐದು ಲಕ್ಷ ರೂ
ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರು ಮಾತನಾಡಿ, ಕಂಬಳದಲ್ಲಿ ಸೇರಿರುವ ಜನರ ಉತ್ಸಾಹ ನೋಡಿದಾಗ ಕಂಬಳದ ಮಹತ್ವ ಗೊತ್ತಾಗುತ್ತದೆ. ನಮ್ಮ ಸಂಸ್ಕೃತಿಯ ಉಳಿವಿಗಾಗಿ ಹಾಗೂ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರ ಮುಂದಿನ ವರ್ಷದಿಂದ ಟೂರಿಮ ಅನುದಾನದೊಂದಿಗೆ 24 ಕಂಬಳಕ್ಕೂ ತಲಾ ಐದು ಲಕ್ಷ ಒದಗಿಸಿಕೊಡುವ ಕೆಲಸ ಸರಕಾರದ ವತಿಯಿಂದ ಮಾಡಲಿದ್ದೇವೆ ಎಂದರು.
ಸಚಿವೆ ಲಕ್ಷ್ಮೀ ಹೆಬ್ನಾಳ್ಕರ್ , ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಎಐಸಿಸಿ ಕಾರ್ಯದರ್ಶಿ ಶ್ರೀನಿವಾಸ್, ಯುವ ಮುಖಂಡರಾದ ಮಿಥುನ್ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಣರಾದ ದೇವಿಪ್ರಸಾದ್ ಶೆಟ್ಟಿ, ದ.ಕ.ಜಿಲ್ಲಾ ಎಸ್ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕಾರವಾರದ ಶಾಸಕರಾದ ಸತೀಶ್ , ಚಿಕ್ಕಮಂಗಳೂರು ಶಾಸಕರಾದ ರಾಜು ಗೌಡ, ಮಾಜಿ ಸಚಿವ ರಮಾನಾಥ ರೈ, ಯೆನೆಪೋಯ ವಿವಿಯ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಣರಾದ ಕಣಚೂರು ಮೋನು, ಎಂಆರ್ ಜಿ ಗ್ರೂಪ್ ನ ಅಧ್ಯಕ್ಷರಾದ ಪ್ರಕಾಶ್ ಶೆಟ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಝ್, ಮುಖಂಡರಾದ ಮಂಜುನಾಥ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕುದ್ರೋಳಿ ಕ್ಷೇತ್ರದ ಪದ್ಮನಾರ್ ಆರ್ ಪೂಜಾರಿ, ನಿಗಮ್ ಭಂಡಾರಿ, ಬೆಳ್ತಂಗಡಿಯ ರಕ್ಷಿತ್ ಶಿವರಾಮ್, ಇನಾಯತ್ ಆಲಿ, ಮಾಲ ನಾರಾಯಣ, ಪ್ರಕಾಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ಟಿ.ಜಿ.ರಾಜಾರಾಂ ಭಟ್, ಡಾ. ಐಕಳ ದೇವಿ ಪ್ರಸಾದ್ ಶೆಟ್ಡಿ,
ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಮಿತ್ತಕೋಡಿ ವೆಂಕಪ್ಪ ಕಾಜವ, ರಾಜ್ಯೊತ್ಸವ ಪ್ರಶಸ್ತಿ ಪಡೆದ ಶಾಂತರಾಮ ಶೆಟ್ಟಿ, ಕಬಡ್ಡಿಪಟು ಧನಲಕ್ಷ್ಮೀ ಪೂಜಾರಿ, ಕ್ರೀಡಾ ಸಾಧಕ ಭಾಸ್ಕರ ದೇವಾಡಿಗ ಬೈಂದೂರು, ಗಣೇಶ್ ಪಂಬದ ಬಾಯಾರು, ಶೈಕ್ಷಣಿಕ ಸಾಧಕಿ ಅಪೇಕ್ಷಾ ಪುಂಡಿಕಾಯಿ, ಕರಾಟೆಪಟು ಆಯಿಷಾ ಮೊದಲಾದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಸ್ವಾಗತಿಸಿದರು. ಪತ್ರಕರ್ತರಾದ ಸತೀಶ್ ಪುಂಡಿಕಾಯಿ ಹಾಗೂ ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.