ಏಡಿಯ ಕೈಗೆ ಕೊಂಬು ಬಂತೇ ?!ಏನಿದು ಕಲಿಗಾಲ ಅಂತೀರಾ? ಮಾಂಸಹಾರಿಗಳಲ್ಲಿ ಏಡಿ ಪ್ರಿಯರು ಈ ಮಾಹಿತಿ ಓದಿದ ಬಳಿಕ ಇನ್ನಾದರೂ ತಾವು ಪದಾರ್ಥ ಮಾಡಲು ತಂದ ಏಡಿ (ತುಳುವಿನಲ್ಲಿ ಡೆಂಜಿ ಅಥವಾ ಜೆಂಜಿ) ಯ ಕೈಕಾಲು ಮುರಿಯುವ ಮೊದಲು ಕೊಂಬು ಗಮನಿಸಲು ಪ್ರಾರಂಭಿಸಬಹುದು. ಕಥೆ ಏನಪ್ಪಾ ಅಂದ್ರೆ, ಕಳೆದ ವಾರ ತೊಕ್ಕೊಟ್ಟು ಬಳಿಯ ಕಲ್ಲಪುವಿನ ಗಂಡಿ ನಿವಾಸಿ ವನಿತಾ ಗಿರೀಶ್ ಪದಾರ್ಥಕ್ಕೆಂದು ಏಡಿ ಖರೀದಿಸಿದ್ದರು.
ಮೀನು ತುಂಡರಿಸಿ ಶುಚಿಗೊಳಿಸುವುದು ಸುಲಭ. ಆದರೆ ಏಡಿಯನ್ನು ಪದಾರ್ಥಕ್ಕೆ ತಯಾರು ಮಾಡುವುದು ಸ್ವಲ್ಪ ಕಷ್ಟ. ತಿನ್ನುವುದು ಇನ್ನೂ ಕಷ್ಟ. ಆದರೆ ಅದರ ರುಚಿಯಾದ ಮಾಂಸವು ಈ ಎಲ್ಲಾ ಕಷ್ಟಗಳನ್ನು ಮರೆಸುತ್ತದೆ ಎನ್ನುವುದು ಏಡಿ ಪ್ರಿಯರ ಅಂಬೋಣ.ವನಿತಾ ಅವರು ಏಡಿಗಳನ್ನು ತುಂಡರಿಸುತ್ತಿದ್ದಂತೆ ಒಂದು ಏಡಿಯ ಕಾಲಿನ ಮೇಲೆ ಒಂದು ವಿಶೇಷ ಬೆಳವಣಿಗೆ ಕಂಡು ಆಶ್ಚರ್ಯ ಚಕಿತರಾದರು. ಸಾಮಾನ್ಯವಾಗಿ ಏಡಿಯ ಕೈಕಾಲುಗಳ ತುದಿಯ ಮೇಲೆ ಮತ್ತೊಂದು ಬೆಳವಣಿಗೆ ಇರುವುದಿಲ್ಲ. (ಚಿತ್ರ ನೋಡಿ)
ಏಡಿಯನ್ನು ಸ್ವಚ್ಛ ಮಾಡುತ್ತಿದ್ದ ಅವರು ಈ ಅಪರೂಪದ ಏಡಿಯನ್ನು ಪದಾರ್ಥ ಮಾಡುವ ಮೊದಲು ಅದರ ಕೈ ಕೊಂಬಿನ ಫೊಟೋ ತೆಗೆದೇ ಬಿಟ್ಟರು. ನೀವೂ ಒಮ್ಮೆ ನೋಡಿ. ಭಗವಂತನ ಸೃಷ್ಟಿ ಲೀಲೆಯ ಅಪರೂಪ ಅಲ್ಲವೇ? ಕೊಂಬಿದ್ದರೂ ಪದಾರ್ಥವಾಗಿ ಹೊಟ್ಟೆ ಸೇರಿದ್ದು ಮಾತ್ರ ವಿಧಿಲೀಲೆಯೇ ಅಲ್ಲವೇ?
ಚಿತ್ರ: ವನಿತಾ ಗಿರೀಶ್