Site icon Ullalavani

ಮಹಿಳೆ ಮೇಲೆ ಹಲ್ಲೆ, ಅವಮಾನ ಪ್ರಕರಣ ; ಆರೋಪಿಗೆ ಕಠಿಣ ಶಿಕ್ಷೆಗೆ ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಆಗ್ರಹ

ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮಹಿಳೆಯ ಮೇಲಿನ ಹಲ್ಲೆ ಹಾಗೂ ಅವಮಾನಕಾರಿ ವರ್ತನೆ ಪ್ರಕರಣವನ್ನು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.


ಪ್ರಕರಣದ ಸಂಬಂಧಿಸಿದಂತೆ ಜ. 06ರ ಮಂಗಳವಾರ ದಂದು ರಾತ್ರಿ ಸುಮಾರು 8 ಗಂಟೆಗೆ ಸುನೀತಾ ಲೋಬೋ ಅವರು ತಮ್ಮ ಪತಿ ವಿಲೈನ್ ಲೋಬೋ ಹಾಗೂ ಮಕ್ಕಳಾದ ವಿಶಾಲ್ ಲೋಬೋ ಮತ್ತು ವಿನೂಶ್ ಲೋಬೋರೊಂದಿಗೆ ಪಜೀರು ಗ್ರಾಮದ ಲೇಡಿ ಆಫ್ ಮರ್ಸಿ ಹಾಲ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ರೋಜ್ ಕಾರ್ಯಕ್ರಮಕ್ಕೆ ತೆರಳಿದ್ದರು. ರೋಜ್ ಕಾರ್ಯಕ್ರಮ ಮುಗಿಸಿ ಊಟ ಮಾಡಿದ ಬಳಿಕ, ರಾತ್ರಿ ಸುಮಾರು 10.45ರ ವೇಳೆಗೆ ಹಾಲ್ ಒಳಗೆ ನಿಂತಿದ್ದಾಗ ವಲೆರಿನ್ ಡಿಸೋಜ ಎಂಬ ಆರೋಪಿಯು ಸುನೀತಾ ಲೋಬೋ ಅವರನ್ನು ದುರುದ್ದೇಶದಿಂದ ನೋಡಿ ಮೈಗೆ ಕೈತಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಈ ಬಗ್ಗೆ ಪ್ರಶ್ನಿಸಿದಾಗ, “ನಾನು ಏನು ಬೇಕಾದರೂ ಮಾಡುತ್ತೇನೆ” ಎಂದು ಬೆದರಿಕೆ ಹಾಕಿ ಆರೋಪಿತನು ಅಲ್ಲಿಂದ ತೆರಳಿದ್ದು, ಸ್ವಲ್ಪ ಸಮಯದ ನಂತರ ಎರಡು ಬಿಯರ್ ಬಾಟಲಿಗಳನ್ನು ಹಿಡಿದುಕೊಂಡು ಬಂದು ಸುನೀತಾ ಲೋಬೋ ಅವರಿಗೆ ಹಲ್ಲೆ ನಡೆಸಿದ್ದಾನೆ. ಬಿಯರ್ ಬಾಟಲಿಯಿಂದ ಹೊಡೆದ ಪರಿಣಾಮವಾಗಿ ಅವರ ಬಲ ಕಣ್ಣಿನ ಕೆಳಭಾಗದಲ್ಲಿ ಗಂಭೀರವಾದ ಊತ ಉಂಟಾಗಿದೆ ಎಂದು ಆರೋಪಿಸಿದ್ದಾರೆ .


ಈ ಸಂದರ್ಭ ಅಲ್ಲಿಗೆ ಬಂದ ಸುನೀತಾ ಲೋಬೋ ಅವರ ಪತಿ ವಿಲೈನ್ ಲೋಬೋ ಹಾಗೂ ಪುತ್ರ ವಿಶಾಲ್ ಲೋಬೋರ ಮೇಲೆ ಕೂಡ ಆರೋಪಿತನು ತೀವ್ರ ಹಲ್ಲೆ ನಡೆಸಿದ್ದು, ವಿಶಾಲ್ ಲೋಬೋ ಅವರ ಎಡಗೈ ಕಚ್ಚಿರುವುದಾಗಿ ಆರೋಪಿಸಿದ್ದಾರೆ .ಜನರು ಸೇರತೊಡಗಿದಾಗ, ಆರೋಪಿತನು ಅವ್ಯಾಚ್ಯ ಶಬ್ದಗಳಿಂದ ಬೈದು, “ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ .
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ವಲೆರಿನ್ ಡಿಸೋಜ ವಿರುದ್ಧ ತಕ್ಷಣ ಕೇಸ್ ದಾಖಲಿಸಿ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸುನೀತಾ ಲೋಬೋ ಅವರಿಗೆ ನ್ಯಾಯ ಒದಗಿಸಬೇಕು ಎಂದು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯೊಬ್ಬರ ಮೇಲೆ ನಡೆದ ಈ ದೌರ್ಜನ್ಯ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ಮತ್ತು ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಉಸ್ತುವಾರಿ ಸುರೇಖಾ ಚಂದ್ರಹಾಸ್ ಅವರ ನೇತೃತ್ವದ ಸಮಿತಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಮಹಿಳೆಯರ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ಸಮಾಜಕ್ಕೆ ಅಪಾಯಕಾರಿಯಾಗಿದ್ದು, ತಪ್ಪಿತಸ್ಥರಿಗೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡಬಾರದು. ಮಹಿಳೆಯರು ಭಯವಿಲ್ಲದೆ ಬದುಕುವ ಸುರಕ್ಷಿತ ವಾತಾವರಣ ನಿರ್ಮಿಸುವ ಹೊಣೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮೇಲಿದೆ ಎಂದು ಮಹಿಳಾ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸ್ ಇಲಾಖೆಗೆ ಮಹಿಳಾ ಕಾಂಗ್ರೆಸ್ ಸಮಿತಿ ಮನವಿ ಮಾಡಿದೆ.

Exit mobile version