Site icon Ullalavani

” ರಾಜಕೇಸರಿ ರಿಪಬ್ಲಿಕ್ ಕಪ್ – ಸೀಸನ್ 1″ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಕುಡ್ಲ ಸಾರಥಿ ಟೈಗರ್ಸ್ ಪ್ರಥಮ

ಮಂಗಳೂರು; ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆ ಸಂಭ್ರಮದ ಪ್ರಯುಕ್ತ ಜ.4ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಎಂಟು ಶ್ರಮಿಕರ ತಂಡಗಳ ನಡುವೆ “ಏಕತೆಗಾಗಿ ಕ್ರಿಕೆಟ್” ಧ್ಯೇಯವಾಕ್ಯದಡಿ ಆಯೋಜಿಸಲಾಗಿದ್ದ ” ರಾಜಕೇಸರಿ ರಿಪಬ್ಲಿಕ್ ಕಪ್ – ಸೀಸನ್ 1″ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ರಿಕ್ಷಾ ಚಾಲಕರ ತಂಡವಾದ ಕುಡ್ಲ ಸಾರಥಿ ಟೈಗರ್ಸ್ ವಿಜಯಶಾಲಿಯಾಗಿದ್ದು ನಗದು ಬಹುಮಾನ ರೂ. 25,000 ಜೊತೆ ಪ್ರತಿಷ್ಠಿತ ಟ್ರೋಫಿಯನ್ನು ತನ್ನದಾಗಿಸಿಕೊಂಡು ಪಂದ್ಯಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿತು.



ರನ್ನರ್ ಅಪ್ ಆಗಿ ಟ್ಯಾಕ್ಸಿ ಚಾಲಕರ ತಂಡವಾದ ” ಡಿ.ಕೆ ಟ್ಯಾಕ್ಸಿ ವಾರಿಯರ್ಸ್ ” ತಂಡವು ಪ್ರತಿಷ್ಠಿತ ಟ್ರೋಫಿ ಜೊತೆ ನಗದು ಬಹುಮಾನ ರೂ. 12,500 ತನ್ನದಾಗಿಸಿಕೊಂಡಿತು. ಶಿಸ್ತುಬದ್ಧ ತಂಡವಾಗಿ ಎಂ.ಸಿ.ಸಿ. ಮಂಗಳೂರು ತಂಡ ಪ್ರಶಸ್ತಿಗೆ ಭಾಜನರಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ರೋಚಕ ಫೈನಲ್ ಪಂದ್ಯದಲ್ಲಿ ” ಕುಡ್ಲ ಸಾರಥಿ ಟೈಗರ್ಸ್ ” ತಂಡದ ತೌಫಿಕ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು ಸರಣಿಯುದ್ಧಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ” ಡಿ.ಕೆ ಟ್ಯಾಕ್ಸಿ ವಾರಿಯರ್ಸ್ ” ತಂಡದ ರಾಕೇಶ್ ರವರು ಉತ್ತಮ ದಾಂಡಿಗ ಮತ್ತು ವಿಕಿಲ್ ರವರು ಉತ್ತಮ ಎಸೆತಗಾರ ಪ್ರಶಸ್ತಿಯನ್ನು ತನ್ನದಾಗಿಸಿದರು. ಸರಣಿಯುದ್ಧಕ್ಕೂ ಅತ್ಯುತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದ ” ಕುಡ್ಲ ಸಾರಥಿ ಟೈಗರ್ಸ್ ” ತಂಡದ ತೌಫಿಕ್ ರವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದು ಮಿಂಚಿದರು. ಎಲ್ಲಾ ವೈಯಕ್ತಿಕ ಪ್ರಶಸ್ತಿ ವಿಜೇತರಿಗೆ ಟ್ರೋಫಿ ಜೊತೆ ತಲಾ 5 ಕೆ.ಜಿ ಅಕ್ಕಿಯನ್ನು ಬಹುಮಾನವಾಗಿ ವಿತರಿಸಲಾಯಿತು.

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಪಂದ್ಯಾಕೂಟವನ್ನು ಉದ್ಘಾಟಿಸಿ ವಿನೂತನ ಪರಿಕಲ್ಪನೆಯ ಪಂದ್ಯಾಟವನ್ನು ಮತ್ತು ಸಾರ್ವಜನಿಕರಿಗೆ ಇನ್ನಿತರ ಸೇವಾ ಚಟುವಟಿಕೆಗಳನ್ನು ಆಯೋಜಿಸಿದ ರಾಜಕೇಸರಿ ಸೇವಾ ಟ್ರಸ್ಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ವಿಶ್ವಕಪ್ ವಿಜೇತ ಭಾರತ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಕುಮಾರಿ ಧನಲಕ್ಷ್ಮಿ ಪೂಜಾರಿ ಮತ್ತು ಅವರ ತರಬೇತುದಾರರಾದ ಹಂಸವತಿ ಹಾಗೂ ಇತ್ತೀಚೆಗೆ ಫಿಲಿಪೈನ್ಸ್ ನಲ್ಲಿ ನಡೆದ ” ಮಿಸಸ್ ಅರ್ಥ್ ಇಂಟರ್ ನ್ಯಾಷನಲ್ ” ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿ ವಿಜೇತರಾದ ” ವಿದ್ಯಾ ಸಂಪತ್ ಕರ್ಕೇರ ” ರವರನ್ನು ಅತ್ಯಂತ ಗೌರವಾದರಗಳಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮಾನವೀಯತೆ ಮೆರೆದ ಖಾಸಗಿ ಬಸ್ ಚಾಲಕ ಮೊಹಮ್ಮದ್ ಮೊಯಿದಿನ್ ರವರನ್ನು ಗೌರವ ಯುತವಾಗಿ ಸನ್ಮಾನಿಸಲಾಯಿತು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ” ಲಯನ್ ಜಯರಾಜ್ ಪ್ರಕಾಶ್ ” , ಸಿಟಿ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ” ಚಂದ್ರಹಾಸ್ ಪಿಲಾರ್ ” , ಟ್ರಸ್ಟ್ ನ ಸಂಸ್ಥಾಪಕರಾದ ” ದೀಪಕ್ ಜಿ ಬೆಳ್ತಂಗಡಿ” , ಕ್ರೀಡಾ ಸಮಿತಿಯ ಗೌರವ ಸಲಹೆಗಾರರಾದ ” ಆನಂದ. ಕೆ” ಮತ್ತು ಯುವ ವಾಹಿನಿ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ” ರೇಖಾ ಗೋಪಾಲ್ ” ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅತಿಥಿಗಳೆಲ್ಲರೂ ಸಾಂಕೇತಿಕವಾಗಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

ಮೂಲತಃ ಮಂಗಳೂರಿನವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ” ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ” ಪ್ರಶಸ್ತಿ ಪುರಸ್ಕೃತ ” ಶಿವಪ್ರಸಾದ್ ಶೇಟ್ ” ಮತ್ತು ಬೆಂಗಳೂರಿನ ಎಸ್. ಕೆ. ಎಫ್ ಫೌಂಡೇಶನ್ ಇದರ ಟ್ರಸ್ಟಿಗಳಾದ ಕೃಷ್ಣಮೂರ್ತಿ ಹಾಗೂ ಶಾಂತ ಕೃಷ್ಣಮೂರ್ತಿರವರು ಆಗಮಿಸಿ ಶುಭ ಹಾರೈಸಿ ವಿನೂತನ ಪರಿಕಲ್ಪನೆಯ ಕ್ರಿಕೆಟ್ ಪಂದ್ಯಾಟದ ಬಗ್ಗೆ ಮುಕ್ತವಾಗಿ ಶ್ಲಾಘಿಸಿದರು. ಪ್ರಸ್ತುತ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಲೀಗ್ ನಲ್ಲಿ ಆಟವಾಡುತ್ತಿರುವ ಪೃಥ್ವಿ ಕೃಷ್ಣಮೂರ್ತಿರವರು ಜೊತೆಯಲ್ಲಿದ್ದರು.

ಸಮಾರೋಪ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ , ಯುವ ಉದ್ಯಮಿ ಹಾಗೂ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಇದರ ಮಾಲೀಕರಾದ ಪ್ರಕಾಶ್, ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಇದರ ಉಪಾಧ್ಯಕ್ಷರಾದ ” ಹರೀಶ್ ಶೆಟ್ಟಿ ಕುತ್ತಾರ್ ” , ಬಿಜೆಪಿ ಮಹಿಳಾ ಮೋರ್ಚಾ ದಕ್ಷಿಣ ಮಂಡಲದ ಕಾರ್ಯದರ್ಶಿ ” ಶಬರಿ ನಿತಿನ್ ಶೆಟ್ಟಿ ” , ಟ್ರಸ್ಟ್ ನ ಜಿಲ್ಲಾಧ್ಯಕ್ಷರಾದ ” ಸಂತೋಷ್ ಕೊಲ್ಯ ” , ಜಿಲ್ಲಾ ಸಂಚಾಲಕರಾದ ಗುರುಪ್ರಸಾದ್ ಕುಲಾಲ್ ರವರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನಗಳನ್ನು ಹಸ್ತಾಂತರಿಸಿದರು.

ವಿಜೆ ಪ್ರತೀಶ್ ಗೌರೀಶ್ ರವರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಮಂಗಳಾದೇವಿಯವರು ಸ್ವಾಗತಿಸಿದರು. ಕ್ರೀಡಾ ಸಂಚಾಲಕರಾದ ಸಂದೀಪ್ ಸಾಲಿಯಾನ್ ರವರು ಧನ್ಯವಾದ ಸಮರ್ಪಿಸಿದರು. ಕ್ರೀಡಾ ಸಹ ಸಂಚಾಲಕರಾದ ಚರಣ್ ಶೆಟ್ಟಿ , ರತೀಶ್ ರೈ , ಯೋಗೇಶ್ ರೈ ಮತ್ತು ಶರತ್ ಕುಮಾರ್. ಯು ಉಪಸ್ಥಿತರಿದ್ದರು.

ಈ ಪಂದ್ಯಾಕೂಟದಲ್ಲಿ ಇನ್ನಿತರ ತಂಡಗಳಾಗಿ ಪೆಟ್ರೋಲ್ ಬಂಕ್ ಶ್ರಮಿಕರು, ಪೌರಕಾರ್ಮಿಕರು , ಬೀದಿಬದಿ ವ್ಯಾಪಾರಸ್ಥರು, ಛಾಯಾಚಿತ್ರಗ್ರಾಹಕರು , ಖಾಸಗಿ ಬಸ್ ಸಿಬ್ಬಂದಿಗಳು , 45 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರು ಪಾಲ್ಗೊಂಡಿದ್ದರು.

ಸಾರ್ವಜನಿಕರಿಗೆ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಯಶಸ್ವಿಯಾಗಿ ನೆರವೇರಿತು.

Exit mobile version