ಮಂಗಳೂರು : ಸಂಘಟನೆಯನ್ನು ಬಲಪಡಿಸಿ, ಪರಸ್ಪರ ವಿಶ್ವಾಸ ಮತ್ತು ಸಹಕಾರವನ್ನು ಹೆಚ್ಚಿಸಿಕೊಂಡು, ಸಮಾಜದಲ್ಲಿ ದೊರಕುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶ್ರಮಪಟ್ಟು ದುಡಿದರೆ, ವ್ಯಕ್ತಿಗತ ಬೆಳವಣಿಗೆಯ ಜೊತೆಗೆ ಸಮೂಹದ ಪ್ರಗತಿಗೂ ದಾರಿ ತೆರೆದು, ಸಮಾಜವು ಒಗ್ಗಟ್ಟಿನ ಶಕ್ತಿಯಾಗಿ ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ನಗರದ ಶ್ರೀಗೋಕರ್ಣನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕೀರ್ತಿಶೇಷ ದಾಮೋದರ ಆರ್ ಸುವರ್ಣ ಅವರ 101ನೇ ಜನ್ಮ ಜಯಂತಿ ಸಂಭ್ರಮ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರಂತೆ ಬದುಕಬೇಕು ಅಂತ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುತ್ತೇನೆ ಅಂತ ಒಂದು ಕುಟುಂಬ ಯೋಜನೆ ಮಾಡಿದರೆ, ಆ ಕುಟುಂಬ ಬದುಕಲಿಕ್ಕೆ ಪೂರ್ಣ ಅವಕಾಶಗಳಿರುವಂತಹ ವ್ಯವಸ್ಥೆಗಳು ಇವತ್ತು ಸಮಾಜದಲ್ಲಿದೆ. ಅದಕ್ಕೆ ಕೀಳರಿಮೆಯನ್ನು ಬಿಟ್ಟು ಈ ಸಮಾಜದಲ್ಲಿ ನಾನೊಬ್ಬ ಸ್ಪರ್ಧಿ, ಎಲ್ಲರಂತೆ ನಾನು ತಲೆ ಎತ್ತಿ ಬದುಕಬೇಕು ಅಂತ ಯೋಜನೆ ಮಾಡಿದರೆ ಅವನ ಹಂಬಲ ಈಡೇರಲಿಕ್ಕೆ ಪರ್ಯಾಯ ಸರಿಯಾದ ಅವಕಾಶಗಳು ಇವತ್ತು ಸಮಾಜದಲ್ಲಿದೆ ಎಂದರು.
ಈ ಸಂದರ್ಭ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಈ ಹಿಂದೆ ಹಿಂದೂ ಸಮಾಜದಲ್ಲೂ ಕೂಡ ಸಾಕಷ್ಟು ಸಮಸ್ಯೆಗಳು ವೈರುಧ್ಯಗಳು ಇತ್ತು. ಆದರೆ ಸಮಾಜದೊಳಗೆ ಹುಟ್ಟಿದ ದಾರ್ಶನಿಕರು ಸಮಾಜಕ್ಕೆ ಸರಿಯಾದ ಗುರಿ, ದೆಸೆ ನೀಡುವ ಕಾಯಕವನ್ನು ಮಾಡಿದರು. ವಿಶೇಷವಾಗಿ ದಕ್ಷಿಣ ಕನ್ನಡದ ಹಿಂದೂ ಸಮಾಜ ಎಲ್ಲರನ್ನು ಒಟ್ಟು ಸೇರಿಸಿಕೊಂಡು ಮುಂದೆ ಸಾಗುವ ಗುಣ ಇಡೀ ದೇಶದಲ್ಲಿಯೇ ಭಿನ್ನ ಸ್ಥಾನವನ್ನು ಪಡೆದುಕೊಂಡಿದೆ. ಈಗಲೂ ಸಮಸ್ಯೆ ಇದ್ದಾಗ ಇಲ್ಲಿನ ಹಿಂದೂ ಸಮಾಜ ಒಟ್ಟು ಸೇರಿಸುವ ಶಕ್ತಿಯನ್ನು ಬೆಳೆಸಿಕೊಂಡಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ , ವಿದ್ಯಾರ್ಥಿಗಳನ್ನು ವಿದ್ಯಾವಂತರಾಗಿ ರೂಪಿಸಿ, ಟ್ರಸ್ಟ್ ಮುಖಾಂತರ ಸಾರ್ಥಕವಾಗಿ ನಡೆಸುತ್ತಿರುವ ಕಾರ್ಯ ನಿಜಕ್ಕೂ ಮಹತ್ತರವಾದದ್ದು. ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ 60 ಲಕ್ಷಕ್ಕೂ ಮಿಕ್ಕಿದ ಹಣವನ್ನು ಮೀಸಲಿಟ್ಟು, ಕೀರ್ತಿಶೇಷ ದಾಮೋದರ ಸುವರ್ಣ ಅವರ ಸ್ಮರಣಾರ್ಥವಾಗಿ ಈ ವಿಶೇಷ ಚಿಂತನೆ ಕೈಗೊಳ್ಳಲಾಗಿದೆ. ಸಮಾಜವನ್ನು ಮುಖ್ಯವಾಹಿನಿಗೆ ತರಬೇಕೆಂಬ ದೃಢ ಉದ್ದೇಶದಿಂದ ವಿದ್ಯಾರ್ಥಿಗಳ ಶಿಕ್ಷಣದತ್ತ ಹೆಚ್ಚಿನ ಗಮನ ನೀಡಲಾಗಿದೆ. ತಮ್ಮ ಜೀವನಕ್ಕೆ ಯಶಸ್ಸು ತಂದುಕೊಟ್ಟವರು ಯಾರು ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸಹಕಾರ ನೀಡಿದ ಸಂಸ್ಥೆಗಳು ಹಾಗೂ ಹೆತ್ತವರನ್ನು ಸದಾ ಗೌರವದಿಂದ ಸ್ಮರಿಸಬೇಕು. ಋಣವನ್ನು ಮರೆಯದೇ ನೆನಪಿನಲ್ಲಿಟ್ಟರೆ ಸದಾ ಆಶೀರ್ವಾದ ದೊರೆಯುತ್ತದೆ. ವರ್ಷಕ್ಕೆ 5 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಯಿಂದ ಹಿಡಿದು ವೈದ್ಯಕೀಯ ಶಿಕ್ಷಣದವರೆಗೆ ಅಲ್ಪಸಂಖ್ಯಾತ ನಿಗಮದ ಮುಖೇನ ಸರಕಾರದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆದರೆ ನಾರಾಯಣ ಗುರು ಅಭಿವೃದ್ಧಿ ನಿಗಮವಾಗಲಿ, ಕುಲಾಲ ನಿಗಮವಾಗಲಿ , ವಿಶ್ವಕರ್ಮ ನಿಗಮಗಳಿಗೆ ಕಳೆದ ಎರಡೂವರೆ ವರ್ಷಗಳಿಂದ ಅನುದಾನವೇ ಬಾರದೇ ಇರುವುದು ಬೇಸರ ತರುತ್ತದೆ. ಈ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಲೇ ಬಂದಿದ್ದೇನೆ. ವಿದ್ಯಾರ್ಥಿಗಳಿಗೆ ನಿಗಮದಿಂದ ಕೇವಲ ನಿಗಮಗಳನ್ನು ರಚಿಸಿ, ಅಧ್ಯಕ್ಷರನ್ನು ಘೋಷಿಸಿ, ಕಾರು ನೀಡುವುದರಿಂದ ಸಮಾಜ ಅಭಿವೃದ್ಧಿಯಾಗುವುದಿಲ್ಲ ಎಂಬುದನ್ನು ಸರಕಾರ ಅರಿಯಬೇಕಿದೆ ಎಂದರು.
ಅಧ್ಯಕ್ಷರಾದ ನವೀನ್ ಚಂದ್ರ ಡಿ ಸುವರ್ಣ ಅವರು ಮಾತನಾಡಿ, ಕೀರ್ತಿಶೇಷ ದಾಮೋದರ ಆರ್. ಸುವರ್ಣರು ಮಾಡಿದಂತಹ ಸಾಧನೆ ಸಮಾಜದ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದದ್ದು. ಅಖಿಲ ಭಾರತ ಬಿಲ್ಲವರ ಯೂನಿಯನ್ ಮುಖೇನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಕಳೆದ ಏಳು ವರ್ಷಗಳಿಂದ ದಾಮೋದರ ಸುವರ್ಣ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಶೇಕಡಾ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ರೂ. 1 ಕೋಟಿವರೆಗೆ ವಿದ್ಯಾರ್ಥಿವೇತನ ಮೊತ್ತವನ್ನು ಹೆಚ್ಚಿಸುವ ಚಿಂತನೆ ಮಾಡಲಾಗಿದೆ ಎಂದರು.
ಈ ಸಂದರ್ಭ ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ, ಟ್ರಿಸ್ಟಿ ಆಶಾ ಸುವರ್ಣ, ಶಾಸಕ ವೇದವ್ಯಾಸ ಕಾಮತ್, ಸುಮಲತಾ ಸುವರ್ಣ, ವಿನಯಚಂದ್ರ ಸುವರ್ಣ, ಜಗದೀಪ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಮ್ಯಾನೇಜಿಂಗ್ ಟ್ರಸ್ಟಿ ಉದಯಚಂದ್ರ ಡಿ ಸುವರ್ಣ ಸ್ವಾಗತಿಸಿ, ಟ್ರಸ್ಟ್ನ ಮೂಲಕ ನಾನಾ ಸಾಮಾಜಿಕ ಸೇವೆಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. ಸುವರ್ಣ ಎಜುಕೇಶನ್ ಲೋನ್ ಮೂಲಕ ಬಡ್ಡಿರಹಿತ ಶಿಕ್ಷಣ ಸಾಲ ನೀಡುವ ಚಿಂತನೆ ಕೂಡ ಮಾಡಲಾಗಿದೆ ಎಂದರು.
ಕೇಶವ ಬಂಗೇರ , ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಸೀತಪ್ಪ ಕೂಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೀನಾ ದಿನೇಶ್ ಪ್ರಾರ್ಥಿಸಿದರು.
