Site icon Ullalavani

ಅಕ್ಷರ ಸಂತನಿಗೆ ಮಿಡಿದ ಸೌಹಾರ್ದ ಮನಸ್ಸುಗಳು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಹರೇಕಳ: ಆ ಶಾಲೆಯೊಂದು ಉದ್ಧಾರ ಆಗಬೇಕಾದರೆ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದವರು ಹಾಜಬ್ಬ. ಮನೆಯಲ್ಲಿ ಊಟಕ್ಕೆ ಗತಿಯಿಲ್ಲದೇ ಇದ್ದರೂ ಊರಿನ ಶಾಲೆಯ ಅಭಿವೃದ್ಧಿಯಾಗಬೇಕು, ಮಕ್ಕಳು ವಿದ್ಯಾವಂತರಾಗಬೇಕೆನ್ನುವ ಉದ್ದೇಶದಿಂದ ಕಿತ್ತಳೆ ಹಣ್ಣನ್ನು ಮಾರಿ ಬಂದ ಹಣವನ್ನು ಶಾಲೆಯ ಕೆಲಸಗಳಿಗೆ ಹಾಕಿಕೊಂಡು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ `ಅಕ್ಷರ ಸಂತ’ ಎಂದುಕೊಂಡೇ ಖ್ಯಾತಿಗಳಿಸಿದ್ದಾರೆ. ಆದರೆ ಸರಿಯಾದ ಸ್ವಂತ ಮನೆ ಇರದ ಹಾಜಬ್ಬ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ನೀಡುವ ಮನೆಗೆ ಕೇಮಾರು ಶ್ರೀ ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಹರೇಕಳದ ನ್ಯೂಪಡ್ಪು ಬಳಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಹಳೇಯದಾದ ಮನೆಯಲ್ಲಿ ಪತ್ನಿ , ಇಬ್ಬರು ಹೆಣ್ಮಕ್ಕಳು ಮತ್ತು ಓರ್ವ ಪುತ್ರನೊಂದಿಗೆ ವಾಸಿಸುತ್ತಿರುವ ಹಾಜಬ್ಬ ಅವರ ಶಿಕ್ಷಣ ಕ್ಷೇತ್ರಕ್ಕಾಗಿ ನಡೆಸಿದ ಕಾರ್ಯ ಲೋಕದ ಬೆಳಕಿಗೆ ಬಂದ ನಂತರ ಸಿಕ್ಕ ಪ್ರಶಸ್ತಿಗಳನ್ನು ಇಡಲು ಮನೆಯಲ್ಲಿ ಸರಿಯಾದ ಜಾಗವಿಲ್ಲ. ಇದನ್ನೆಲ್ಲಾ ಮನಗಂಡ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಂಘಟನೆಯವರು 850 ಚದರ ಅಡಿ ವಿಸ್ತಾರದ ಮನೆಯನ್ನು ಉಚಿತವಾಗಿ ನಿರ್ಮಿಸಿಕೊಡಲಿದ್ದಾರೆ. ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮಿ ಮನೆಯ ಶಂಕುಸ್ಥಾಪನೆಯನ್ನು ಭಾನುವಾರ ನೆರವೇರಿಸಿ ಸರ್ವಸ್ವವನ್ನು ಸಮಾಜಕ್ಕಾಗಿ ಅರ್ಪಿಸಿದ ಅಕ್ಷರ ಸಂತ ಹಾಜಬ್ಬನವರಿಗೆ ಮನೆ ನಿರ್ಮಿಸಿಕೊಡುವುದು ಯೋಗ್ಯದ ಕೆಲಸ. ಸಮಾಜಕ್ಕಾಗಿ ಶ್ರಮಿಸಿದ ಮುಸ್ಲಿಂ ವ್ಯಕ್ತಿಗೆ, ಕ್ರೈಸ್ತ ಸಂಘಟನೆ ಕಟ್ಟಿಸಿ ಕೊಡುವ ಮನೆಗೆ, ಹಿಂದು ಧಾರ್ಮಿಕ ಮುಂದಾಳುವಿನ ಮೂಲಕ ಶಂಕುಸ್ಥಾಪನೆಯನ್ನು ನೆರವೇರಿಸಿರುವ ಕಾರ್ಯ ಸಮಾಜದ ಶಾಂತಿ ಸಹೋದರತೆಗೆ ಅಡಿಗಲ್ಲು ಹಾಕಿದಂತಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಹಾಜಬ್ಬರನ್ನು ಗುರುತಿಸಿ ಮನೆಯನ್ನು ಒದಗಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ನೀಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಾಧನೆ ಗುರುತಿಸಿ ಇಂತಹ ಸೇವಾ ಕಾರ್ಯವನ್ನು ಕೈಗೊಂಡ ಸಂಘಟನೆ ಕಾರ್ಯ ಶ್ಲಾಘನೀಯ ಎಂದರು.

ಪೆರ್ಮನ್ನೂರು ಚರ್ಚಿನ ಧರ್ಮಗುರು ಜೆ.ಬಿ.ಸಲ್ದಾನ್ಹ, ನ್ಯೂಪಡ್ಪು ಮಸೀದಿ ಧರ್ಮಗುರು ಶರೀಫ್ ಸದಿ ನಂದಾವರ, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ನಿನ ಅಧ್ಯಕ್ಷ ಅಲ್ಬಾನ್ ಮಿನೇಜಸ್, ತಾಲೂಕು ಪಂಚಾಯಿತಿ ಸದಸ್ಯ ಮುಸ್ತಾಫ ಹರೇಕಳ, ಹರೇಕಳ ಗ್ರಾ.ಪಂ ಅಧ್ಯಕ್ಷೆ ಅನಿತಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Exit mobile version