ನರಿಂಗಾನ,ಡಿ.20: ನರಿಂಗಾನ ಕಲ್ಲರಕೋಡಿ ಸರ್ಕಾರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರೆಂದೇ ಕರೆಸಿಕೊಳ್ಳುತ್ತಿದ್ದ ಪ್ರಭಾಕರ್ ಜೋಗಿ ಅವರು ಮಾಡೂರು ಸಮೀಪದ ಕೊಂಡಾಣದಲ್ಲಿರುವ ತನ್ನ ಸ್ವಂತ ನಿವಾಸದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಭಾಕರ ಜೋಗಿಯವರು ಉಳ್ಳಾಲ ತಾಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು, ವಿದ್ಯಾರ್ಥಿಗಳು ಮೆಚ್ಚಿದ ಶಿಕ್ಷಕರಾಗಿದ್ದರು. ಅದಲ್ಲದೇ ದೈಹಿಕ ಶಿಕ್ಷಕರ ಸಂಘಟನೆಗಳಲ್ಲಿಯೂ ಗುರುತಿಸಿಕೊಂಡವರಾಗಿದ್ದರು.
ಸರಳ, ಸಜ್ಜನಿಕೆಯ ಸ್ವಭಾವವುಳ್ಳವರು, ಒರ್ವ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳುವ ಸ್ಥಾನದಲ್ಲಿದ್ದ ಜೋಗಿಯವರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜವಾಗಿಯೂ ದರಂತವೇ ಸರಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿಂದೆ ಪ್ರಭಾಕರ ಜೋಗಿಯವರು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.