Site icon Ullalavani

ದಾಮೋದರ್ ಆರ್ ಸುವರ್ಣ ಎಜ್ಯುಕೇಷನ್ ಟ್ರಸ್ಟ್ನಿಂದ ರೂ.50ಲಕ್ಷ ಮೌಲ್ಯದ ಪುರಸ್ಕಾರ, ವಿದ್ಯಾರ್ಥಿ ವೇತನ

ಮಂಗಳೂರು; ದಾಮೋದರ್ ಆರ್ ಸುವರ್ಣ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪ, ಕುದ್ರೋಳಿ, ಮಂಗಳೂರು ಇಲ್ಲಿ ಡಿ.21 ರಂದು ಬೆಳಿಗ್ಗೆ 10.00 ಕ್ಕೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಸಮಾರಂಭ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯರು ಬಿ.ಕೆ. ಹರಿಪ್ರಸಾದ್ ನೆರವೇರಿಸಲಿದ್ದು, ವಿದ್ಯಾರ್ಥಿ ವೇತನವನ್ನು ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ವಿತರಿಸಲಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಿರುವರು. ಸಭಾಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ಶ್ರೀ ನವೀನ್ ಚಂದ್ರ ಸುವರ್ಣ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಹಿಸಲಿದ್ದಾರೆ.

ಸರ್ವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ, ಕಾರ್ಯಾಧ್ಯಕ್ಷರಾಗಿರುವ ಉದಯಚಂದ್ರ ಸುವರ್ಣ, ಸಂಘಟಕ ವಿನಯಚಂದ್ರ ಸುವರ್ಣ, ಕಾರ್ಯದರ್ಶಿಗಳಾಗಿರುವ ಜಗದೀಪ್ ಸುವರ್ಣ ಸೇರಿದಂತೆ ಸದಸ್ಯರುಗಳಾಗಿರುವ ಜ್ಯೋತಿ ವಿಶ್ವನಾಥ್, ಸ್ವರ್ಣ ಕುಮಾರಿ, ಕಲ್ಪನಾ ಸಾಯಿರಾಮ್, ರೂಪಾ ಪ್ರೇಮ್ ಕೋಟ್ಯಾನ್ ಹಾಗೂ ಹರ್ಷನ್ ಎನ್ ಸುವರ್ಣ, ನಿಖಿಲ್ ಸುವರ್ಣ, ಡಾ. ಧೀರಜ್ ವಿಶ್ವನಾಥ್, ಡಾ. ಹರ್ಷಿತಾ, ನಿಧಿಶಾ ಮಯೂರ್, ಡಾ| ವೈಷ್ಣವಿ, ಅಕ್ಷಯ್ ಕೋಟ್ಯಾನ್, ಸಾಯಿರಾಜ್, ಶ್ರೀಮತಿ ಗ್ರೀಷ್ಮ ಬಂಗೇರ, ಸೀತಪ್ಪ ಕೂಡೂರು, ದಿನೇಶ್ ಕೆ., ಸೌಜನ್ಯ ಆತಿಶ್ ಸುವರ್ಣ, ತನ್ವಿ ಸುವರ್ಣ ,ಡಾ | ಶಮೀಳ, ನಿಶಾಂಕ್ ಸುವರ್ಣ, ರೋಶಿನಿ ದಿವಿತ್, ಶಮಿತ್ ಕೋಟ್ಯಾನ್, ಡಾ | ಅಭಿನಂದನ್ ಕೋಟ್ಯಾನ್, ಐಶ್ವರ್ಯ ಸಾಯಿರಾಮ್, ಡಾ ಪೂಜಾ ಕೋಟ್ಯಾನ್, ಕೆ.ಟಿ. ಸುವರ್ಣ, ಎಸ್.ಎಸ್. ಪೂಜಾರಿ ಆಹ್ವಾನಿಸಿದ್ದಾರೆ.

ದಾಮೋದರ್ ಆರ್ ಸುವರ್ಣರ ಕಿರುಪರಿಚಯ

ಕೀರ್ತಿಶೇಷ ದಾಮೋದರ ಸುವರ್ಣರು

ಸಮಾಜ ಪರಿವರ್ತನೆಯ ಮಹಾನ್ ಪಥಪ್ರದರ್ಶಕ, ಹಿಂದುಳಿದ ವರ್ಗದ ನೆಲೆಗಟ್ಟು ಬದಲಿಸಿದ ಸಂಘಟನಾ ಯೋಗಿ, ಶಿಕ್ಷಣ ಪ್ರಸಾರದ ನವಯುಗದ ರೂವಾರಿಯಾಗಿದ್ದ ಕೀರ್ತಿಶೇಷ ದಾಮೋದರ ಆರ್. ಸುವರ್ಣ (24-09-1924 11-04-1993) ರವರ 101ನೇ ಜನ್ಮಜಯಂತಿ ಸಂಭ್ರಮವು ಈ ವರ್ಷ ಮಹತ್ವದ ಅರ್ಥ ಪಡೆದಿದೆ. ಭಕ್ತಿ, ಜ್ಞಾನ, ಪ್ರಯತ್ನಗಳ ಸಮಪಾಕದಿಂದ ವ್ಯಕ್ತಿ ಹಾಗೂ ಸಮಾಜದ ಪ್ರಗತಿಯನ್ನು ಸಾಧಿಸಬೇಕೆಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಸೂತ್ರವನ್ನು ಕೇವಲ ಬೋಧನೆ ಅಲ್ಲ, ನೈಜ ಜೀವನದಲ್ಲಿ ಅಳವಡಿಸಿಕೊಂಡು ಎರಡು ದಶಕಗಳ ಕಾಲ ಅದನ್ನು ಯಶಸ್ವಿಗೊಳಿಸಿದ ಮಹಾನುಭಾವರು ದಾಮೋದರ ಆರ್. ಸುವರ್ಣರು.

ಎಪ್ಪತರ ದಶಕದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಸಂಘಟನೆಯ ಅಧ್ಯಕ್ಷರಾಗಿ ಹೊಣೆ ಹೊತ್ತು, ಮಿಂಚಿನ ಸಂಚಾರ, ಉದಾರ ಆರ್ಥಿಕ ಬೆಂಬಲ ಹಾಗೂ ಅಸಮಾನ್ಯ ಸಂಘಟನಾ ಶಕ್ತಿಯಿಂದ ಬಿಲ್ಲವ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿದವರಾಗಿದ್ದಾರೆ. ಕರಾವಳಿಯಿಂದ ಹೊರನಾಡಿನವರೆಗೆ ಅವರ ಕಾರ್ಯಾವಧಿಯಲ್ಲಿ ಬೆಳೆದ ಸಂಘ-ಸAಸ್ಥೆಗಳು, ಶಿಕ್ಷಣ ಮಂಟಪಗಳು, ಧಾರ್ಮಿಕ ಕುಟೀರಗಳು, ಸಮಾಜ ಸೇವಾ ಘಟಕಗಳು ಎಲ್ಲವೂ ಅವರ ತ್ಯಾಗದ ಮೌನ ಸಾಕ್ಷಿಗಳು.

ಶಿಕ್ಷಣ ಪ್ರಸಾರದ ಶಿಲ್ಪಿ ;

1977ರಲ್ಲಿ ಕುದ್ರೋಳಿಯಲ್ಲಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಸ್ಥಾಪಿಸಿರುವುದು ಅವರ ಸಾಧನೆಯ ಆರಂಭ. ಇದರಲ್ಲಿ ನಂತರ ಸುಂಕದಕಟ್ಟೆ, ಕಾಟಿಪಳ್ಳ, ರೆಡ್ಡಿಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಿಕ್ಷಣ ಮಂಟಪಗಳು ಹೊಳೆದು ಬಂದವು. ಕೋಲಾರದ ಆರ್.ಎಲ್. ಜಾಲಪ್ಪ ಮೆಡಿಕಲ್ ಕಾಲೇಜ್ ಸ್ಥಾಪನೆಗೂ ದಾಮೋದರ ಆರ್. ಸುವರ್ಣರ ಕಾರಣೀಕರ್ತರು. ಅವರು ಕೇವಲ ಸಂಘಟಕರು ಅಲ್ಲ ಕುಟುಂಬ ವತ್ಸಲರು, ಮಾನವೀಯತೆಯ ಪ್ರತಿಪಾದಕರೂ ಆಗಿದ್ದರು. ಶಿಸ್ತು, ಸಂಯಮ, ಕಠಿಣ ಪರಿಶ್ರಮ ಇವೆಲ್ಲಕ್ಕೂ ಅವರು ಜೀವಂತ ಮಾದರಿ.

ಹಿರಿಯರ ಕನಸು ಇಂದಿನ ಪೀಳಿಗೆಯ ಬೆಳಕು;

ಈ ಮಹಾನ್ ಪುರುಷನ ಅದರ್ಶ ಜೀವನಕ್ಕೆ ಸಲ್ಲುವ ಗೌರವವಾಗಿ ದಾಮೋದರ ಆರ್. ಸುವರ್ಣ ಎಜ್ಯುಕೇಶನ್ ಟ್ರಸ್ಟ್ (ರಿ.) ಈ ವರ್ಷವೂ ಅದ್ದೂರಿಯಾಗಿ ರೂ. 50 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ಕೇವಲ ವೇತನವಲ್ಲ ಅವರ ಕನಸಿನಲ್ಲಿದ್ದ “ಶಿಕ್ಷಣೆ ಮೂಲಕವೇ ಸಮಾಜೋನ್ನತಿ” ಎಂಬ ತತ್ವದ ಜೀವಂತ ವಿಸ್ತರಣೆ. ದುಡಿದ ಸಂಪಾದನೆಯಲ್ಲಿ ಅಲ್ಪವನ್ನಾದರೂ ಸಮಾಜಕ್ಕೆ ನೀಡುವವರಾಗಿರಿ ಅನ್ನುವ ದಾಮೋದರ ಸುವರ್ಣರ ಮಾತುಗಳನ್ನು ಸ್ಪೂರ್ತಿಯಾಗಿರಿಸಿಕೊಂಡು ಅವರ ಇಡೀ ಕುಟುಂಬ ಮಕ್ಕಳ ಶಿಕ್ಷಣಕ್ಕೆ ಬೆಳಕಾಗುತ್ತಿದ್ದಾರೆ.

ಶಿಕ್ಷಣವೇ ಸಮಾಜದ ದಾರಿದೀಪ ಅನ್ನುವ ಸಂದೇಶ ಸಾರಿದವರು;

ಆರ್ಥಿಕವಾಗಿ ಹಿಂದುಳಿದರೂ ವಿದ್ಯೆಯಲ್ಲಿ ಹಿಂಜರಿಯಬಾರದು ಎಂಬ ದಾಮೋದರ ಆರ್. ಸುವರ್ಣರ ಜೀವನೋದ್ದೇಶಕ್ಕೆ ಇದು ಪ್ರಬಲ ಪೂರಕವಾದಂತಹ ಕಾರ್ಯಕ್ರಮವಾಗಿದೆ. ಶಿಕ್ಷಣವೇ ಸಮಾಜದ ದಾರಿದೀಪ ಎಂಬ ಅವರ ಶಾಶ್ವತ ಸಂದೇಶ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಜಾಗೃತವಾಗುತ್ತಿದೆ. ಸಮಾಜದ ಧ್ರುವತಾರೆ ದಾಮೋದರ ಆರ್. ಸುವರ್ಣ ಅವರ ಸಕಾರಾತ್ಮಕತೆಯ ಹೊಳಪು, ಸೇವಾ ಮನೋಭಾವ, ಶಿಕ್ಷಣ ಪ್ರಸಾರದ ಕ್ರಾಂತಿ, ಎಲ್ಲವೂ ಇಂದು ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕಾಗಿವೆ. 101ನೇ ಜನ್ಮಜಯಂತಿಯ ಈ ವಿಶೇಷ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರೂ ಸೇವೆಯೇ ಧರ್ಮ ಶಿಕ್ಷಣವೇ ಶಕ್ತಿ ಎಂಬ ಅವರ ಸಂದೇಶವನ್ನು ಹೃದಯದಲ್ಲಿ ಹೊತ್ತಿರಬೇಕಾಗಿದೆ.

Exit mobile version