ಉಳ್ಳಾಲ:ನ-17; ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕುಣಿತ ಭಜನೆಯಲ್ಲಿ ಭಾಗವಹಿಸಬೇಕಿದೆ. ಕುಣಿತ ಭಜನೆಯನ್ನು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತ ಮಾಡದೆ ನಮ್ಮ ಸುತ್ತಮುತ್ತಲಲ್ಲಿ ನಡೆಯುವ ಶುಭ ಕಾರ್ಯಗಳಿಗೂ ಅದನ್ನ ಪಸರಿಸಬೇಕಿದೆ. ಜೀವನದಲ್ಲಿ ಭಜನೆಯನ್ನ ನಿರಂತರ ಅಳವಡಿಸುವ ಮೂಲಕ ಧರ್ಮ ಜಾಗೃತಿಗೊಳಿಸಬೇಕಿದೆಯೆಂದು ರಾಜ್ಯ ಮಟ್ಟದ ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ಣದ ಮಾರುತಿ ಜನಸೇವಾ ಸಂಘ,ಮಾರುತಿ ಯುವಕ ಮಂಡಲದ ನಲ್ವತ್ತನೇ ವರ್ಷಾಚರಣೆ ಪ್ರಯುಕ್ತ “ಮಾರುತಿ ಮಾಣಿಕ್ಯ ಮಹೋತ್ಸವ-2025” ರ ನಲ್ವತ್ತು ವಿಶೇಷ ಸಮಾಜಮುಖಿ ಕಾರ್ಯಕ್ರಮಗಳ ಪ್ರಯುಕ್ತ ಉಳ್ಳಾಲ ಮೊಗವೀರ ಪಟ್ಣದ ವ್ಯಾಘ್ರ ಚಾಮುಂಡೇಶ್ವರಿ ಕ್ಷೇತ್ರದ ಆವರಣದ ಮಾಧವ ಮಂಗಳ ಸಭಾ ಭವನದಲ್ಲಿ ಭಾನುವಾರದಂದು ನಡೆದ ಆಯ್ದ ಪರಿಣಿತ ತಂಡಗಳ “ಭಜೊರೇ ಮಾರುತಿ 2025” ಕುಣಿತ ಭಜನಾ ಸ್ಫರ್ಧೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಮಾರುತಿ ಜನಸೇವಾ ಸಂಘದ ಅಧ್ಯಕ್ಷರಾದ ಸಂದೀಪ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.ರಂಗಭೂಮಿ ಕಲಾವಿದರು ,ನೀನಾಸಂ ಪದವೀಧರರಾದ ಶೀನ ನಾಡೋಳಿ,ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಯಶವಂತ್ ಪಿ.ಅಮೀನ್,ವ್ಯಾಘ್ರ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಂದ್ರ ಪುತ್ರನ್,ಚಲನ ಚಿತ್ರನಟ ವಿಸ್ಮಯ ವಿನಾಯಕ್,ತಣ್ಣೀರು ಬಾವಿ ಮೊಗವೀರ ಮಹಾಸಭಾ ಅಧ್ಯಕ್ಷರಾದ ಲೀಲಾಧರ ತಣ್ಣೀರುಬಾವಿ,ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನ ಸ್ಥಾಪಕ ಟ್ರಸ್ಟಿ ಪ್ರವೀಣ್ ಎಸ್.ಕುಂಪಲ,ಮಾರುತಿ ಜನಸೇವಾ ಸಂಘದ ಪ್ರಧಾನ ಸಂಚಾಲಕರಾದ ಸುಧೀರ್ ವಿ.ಅಮೀನ್,ಗೌರವಾಧ್ಯಕ್ಷರಾದ ವರದರಾಜ್ ಬಂಗೇರ,ಪ್ರಧಾನ ಕಾರ್ಯದರ್ಶಿ ಕಪಿಲ್ ಬಂಗೇರ,ಕೋಶಾಧಿಕಾರಿ ಅನಿಲ್ ಚರಣ್,ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಪ್ರಶಾಂತ್.ಬಿ.ಉಳ್ಳಾಲ್ ಸ್ವಾಗತಿಸಿದರು.ಸಾಹಿತಿ ಡಾ.ಅರುಣ್ ಉಳ್ಳಾಲ್ ನಿರೂಪಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಬೋಳಾರದ ವಿಜಯ ಗೇಮ್ಸ್ ಟೀಮ್,ರಾಜ್ಯ ಮಟ್ಟದ ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ, ಕುಣಿತ ಭಜನೆ ಸಂಯೋಜಕರಾದ ಸಾಹಿತಿ ಡಾ.ಅರುಣ್ ಉಳ್ಳಾಲ್,ತೀರ್ಪುಗಾರರಾಗಿದ್ದ ಕಾಪುವಿನ ಚಂದ್ರಶೇಖರ ಕೆ.ಸುವರ್ಣ ಮತ್ತು ಕುಂದಾಪುರದ ಜಯಕರ ಪೂಜಾರಿ ಗುಲುವಾಡಿಯವರನ್ನ ಅಭಿನಂದಿಸಲಾಯಿತು.
ಕುಣಿತ ಭಜನಾ ಸ್ಫರ್ಧೆಯಲ್ಲಿ ಶ್ರೀರಾಮ ಮುಖ್ಯಪ್ರಾಣ ಕುಣಿತ ಭಜನಾ ತಂಡ ಕೋಡಿಕಲ್ ಪ್ರಥಮ ಸ್ಥಾನ, ಶ್ರೀ ದೇವಿ ಭಜನಾ ಮಂಡಳಿ ನೀರೆ ಬೈಲೂರು ದ್ವಿತೀಯ ಸ್ಥಾನ,ಈಶ್ವರಿ ಭಜನಾ ಮಂಡಳಿ ಪೊಳಲಿ ತೃತೀಯ ಸ್ಥಾನ,ಶ್ರೀನಿವಾಸ ಕುಣಿತ ಭಜನಾ ಮಂಡಳಿ ಕಟೀಲು ಚತುರ್ಥ ಸ್ಥಾನ ಗಳಿಸಿತು.ಗುರು ರಾಘವೇಂದ್ರ ಭಜನಾ ಮಂಡಳಿ ಮೂಡಬಿದಿರೆ ಮತ್ತು ನಾರಳ ಸೀತಾರಾಮ ಭಜನಾ ಮಂಡಳಿ ತಂಡಗಳು ಸಮಾಧಾನಕರ ಪ್ರಶಸ್ತಿ ಪಡೆದವು.
ಕುಣಿತ ಭಜನೆಯಲ್ಲಿ ಪುರುಷರ ಪಾಲ್ಗೊಳ್ಳುವಿಕೆ ತೀರಾ ಕಡಿಮೆಯಾಗುತ್ತಿದೆ.ಪುರುಷರು ಕುಣಿತ ಭಜನೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಇಲ್ಲಿ ನಡೆದ ಸ್ಫರ್ಧೆಯಲ್ಲಿ ಮಹಿಳೆಯರು ಮತ್ತು ಪುರುಷರ ಸಮಾನ ಮಿಶ್ರಿತ ತಂಡಗಳಿಗೆ ಅವಕಾಶ ನೀಡುವ ಮೂಲಕ ನೂತನ ನಿಯಮ ಅನುಸರಿಸಿದ್ದು ಅಭಿನಂದನೀಯ. ಸಂದೇಶ್ ಮದ್ದಡ್ಕ,ರಾಜ್ಯ ಮಟ್ಟದ ಭಜನಾ ತರಬೇತುದಾರರು.