Site icon Ullalavani

ಕುತ್ಲೂರು ಚಿನ್ನಾಭರಣ ಕಳವು ಪ್ರಕರಣ; ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ

ಬೆಳ್ತಂಗಡಿ, ;13: ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಮಂಜುಶ್ರೀ ನಗರದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಮುಂಬಾಗಿಲ ಬೀಗ ಮುರಿದು ಸುಮಾರು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕುಖ್ಯಾತ ಅಂತಾರಾಜ್ಯ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ (71) ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 11ರ ರಾತ್ರಿ ಪಿಎಸ್‌ಐ ಓಮನ ಮತ್ತು ಅವರ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಅನುಮಾನಾಸ್ಪದವಾಗಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ್ದರು. ಆತನ ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನಿಸಿದಾಗ, ಆತನೇ ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಎಂದು ಪೊಲೀಸರು ಗುರುತಿಸಿದರು. ಪ್ರಾಥಮಿಕ ತನಿಖೆಯಲ್ಲಿ, ಮಂಗಳೂರಿನಲ್ಲಿ ನಡೆದ ಕಳ್ಳತನದಲ್ಲೂ ಆತನ ಪಾತ್ರವಿರುವ ಶಂಕೆ ವ್ಯಕ್ತವಾಗಿತ್ತು. ಕುತ್ಲೂರು ಗ್ರಾಮದ ಮನೆಯಲ್ಲಿ ಕಳ್ಳತನ ನಡೆಸಿರುವುದು ಪ್ರಾಥಮಿಕ ತನಿಖೆ ದೃಢಪಟ್ಟಿದೆ.ಮಂಜುಶ್ರೀ ನಗರ ನಿವಾಸಿ ಅವಿನಾಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಕ್ಟೋಬರ್ 2ರಂದು ಅವರು ಮನೆಗೆ ಬೀಗ ಹಾಕಿ ಹೋಗಿದ್ದರು. ಅಕ್ಟೋಬರ್ 6ರಂದು ಸಂಜೆ 5 ಗಂಟೆಗೆ ಅವರು ಹಿಂದಿರುಗಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿತ್ತು. ಕಳುವಾದ ವಸ್ತುಗಳಲ್ಲಿ ಕರಿಮಣಿ ಸರ, ಮುತ್ತಿನ ಸರ ಮತ್ತು ಚಿನ್ನದ ಸರಗಳು ಸೇರಿದ್ದು, ಒಟ್ಟು 149 ಗ್ರಾಂ ತೂಕವಿದ್ದು, ಅದರ ಮೌಲ್ಯ ಸುಮಾರು 9.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪೊಲೀಸರ ಮನವಿ ಮೇರೆಗೆ ನ್ಯಾಯಾಲಯವು ನವೆಂಬರ್ 15ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ್‌ಮಠ ಮತ್ತು ವೇಣೂರು ಪೊಲೀಸ್ ತಂಡದ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

Exit mobile version