ಉಳ್ಳಾಲ: ಕೃಷಿ ಉತ್ಸವ – ಆಹಾರ ಮೇಳ ರೈತರಿಗೆ ಶಕ್ತಿ ತುಂಬುವ ವೇದಿಕೆಯಾಗಿದೆ. “ಕೃಷಿ ಉತ್ಸವ ಮತ್ತು ಆಹಾರ ಮೇಳವು ಅತ್ಯುತ್ತಮ ಸಂದರ್ಭ. ಇಂತಹ ಕಾರ್ಯಕ್ರಮಗಳು ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಈ ಬಾರಿ ಉಳ್ಳಾಲದ ಕೃಷಿ ಮೇಳಕ್ಕೆ ಜನಸಾಗರವೇ ಹರಿದುಬರಲಿದೆ ಎಂದು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅಭಿಪ್ರಾಯಪಟ್ಟರು.
ಅವರು ರೈತಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕರ್ನಾಟಕ ಗೇರು ಅಭಿವೃದ್ದಿ ನಿಗಮ ಮಂಗಳೂರು, ಕೃಷಿ ಇಲಾಖೆ ಮಂಗಳೂರು, ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಹಾಗೂ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜನೆಗೊಂಡ ಉಳ್ಳಾಲ ಕೃಷಿ ಉತ್ಸವ-ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ, ಪರಿಸರ ಮಾಲಿನ್ಯ ಮತ್ತು ಅತಿಯಾದ ಫರ್ಟಿಲೈಜರ್ ಬಳಕೆಯಿಂದ ಭೂಮಿ ಬಂಜರುಗೊಳ್ಳುವ ಪರಿಸ್ಥಿತಿ ಬಂದಿದೆ. ಮನುಷ್ಯನ ಸಹಜ ಸ್ವಾರ್ಥವೇ ಇದಕ್ಕೆ ಕಾರಣ. ಆದರೆ ಸ್ವದೇಶಿ ದನಗಳ ಸಾಕಾಣಿಕೆಯನ್ನು ಉತ್ತೇಜಿಸುವ ಮೂಲಕ ಈ ಪರಿಸ್ಥಿತಿಯನ್ನು ಸುಧಾರಿಸಬಹುದು. “ಭಾರತೀಯ ದೇಸಿ ದನದ 60 ಲಕ್ಷ ಟನ್ ಸೆಗಣಿಯನ್ನು ಇತ್ತೀಚೆಗೆ ಕರ್ಜುರ ಬೆಳೆಸಲು ಅರಬ್ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ. ಇದರಿಂದ ಸ್ಥಳೀಯ ಸಂಪನ್ಮೂಲಗಳ ಮಹತ್ವ ವಿಶ್ವಕ್ಕೆ ಗೊತ್ತಾಗಿದೆ. ಇಸ್ರೇಲ್‌ನಲ್ಲಿ ಕೃಷಿಯನ್ನು ಅಧ್ಯಯನ ಮಾಡಲು ಅನೇಕ ದೇಶಗಳಿಂದ ಜನ ತೆರಳುತ್ತಾರೆ. ನಮ್ಮ ರೈತನಿಗೂ ಅಂಥ ಶಕ್ತಿ ತುಂಬುವ ಅಗತ್ಯವಿದೆ ಎಂದ ಅವರು ಮುಂದಿನ ವರ್ಷದಲ್ಲಿ ನಾನೂ ಸೇರಿಕೊಂಡು ಈ ಉತ್ಸವವನ್ನು ಸಂಭ್ರಮವಾಗಿ ಆಚರಿಸಲು ಬಯಸುತ್ತೇನೆ. ಕೇಂದ್ರ ಸರ್ಕಾರದಿಂದ ರೈತರಿಗೆ ದೊರೆಯುತ್ತಿರುವ ಬೆಂಬಲ ಬೆಲೆ, ವಿಮೆ ಮತ್ತು ವಿವಿಧ ಯೋಜನೆಗಳ ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಮಾತನಾಡಿ, ಶೃಂಗೇರಿಯಿಂದಲೂ ಕೃಷಿಕರು ಆಗಮಿಸಿ, ತಮ್ಮ ಉತ್ಪಾದಿತ ವಸ್ತುಗಳನ್ನು ಪ್ರದರ್ಶಿಸಿ ಮಳಿಗೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ನೀಡಲಾದ ಸನ್ಮಾನವೂ ಪ್ರಶಂಸನೀಯ. ಮುಂದಿನ ಸೋಮವಾರದಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ಆಗಮನದಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಸೇರ್ಪಡೆಯಾಗಲಿದೆ. ಜಿಲ್ಲಾಮಟ್ಟದಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ರೈತರಲ್ಲಿ ಉತ್ಸಾಹ ಮತ್ತು ಉಲ್ಲಾಸವನ್ನು ತುಂಬುವ ಕಾರ್ಯಾಗಾರಗಳು ನಡೆಯಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ದೇಶದ ನಾಡಿ ರೈತರು ತಯಾರಿಸಿರುವ ಎಲ್ಲಾ ಖಾದ್ಯಗಳ ಪ್ರದರ್ಶನ ಹಾಗೂ ರೈತರಿಗೆ ಅಗತ್ಯವಿರುವ ವಿವಿಧ ಸವಲತ್ತುಗಳ ಸ್ಟಾಲ್‌ಗಳನ್ನು ಅಳವಡಿಸುವ ಮೂಲಕ ಆಯೋಜಕರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಈ ಮೇಳಕ್ಕೆ ಇನ್ನಷ್ಟು ಪ್ರಚಾರ ದೊರೆತರೆ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ. ಯಾವುದೇ ಮಳಿಗೆಯಲ್ಲಿ ಸಿಗದ ಅನನ್ಯ ವಸ್ತುಗಳು ಇಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ದೊರೆಯುತ್ತಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕರಾದ ನಾರಾಯಣ ರೈ ಕೊಂಡಾಣ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಛಾಯಾಗ್ರಾಹಕ ಪತ್ರಕರ್ತರಾದ ಸತೀಶ್ ಇರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚಿನ ಧರ್ಮಗುರು ಫಾ.ಸಿಪ್ರಿಯನ್ ಪಿಂಟೋ, ಪೊಲದವರ ಯಾನೆ ಗಟ್ಟಿಯವರ ಸೇವಾ ಸಮಾಜದ ಉಪಾಧ್ಯಕ್ಷ ಚಂದ್ರಶೇಖರ ಗಟ್ಟಿ ಗುಂಡ್ಯ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲ್, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಉಪಸ್ಥಿತರಿದ್ದರು.
ಅಖಿಲಾ ಅಗರಿ ನಿರೂಪಿಸಿದರು. ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಸ್ವಾಗತಿಸಿದರು. ಸುಮಲತಾ ಕೊಣಾಜೆ ವಂದಿಸಿದರು.
ಆಕರ್ಷಣೀಯ ವಸ್ತ್ರಮಳಿಗೆಗಳು
ತೊಕ್ಕೊಟ್ಟು ಅಂಬಿಕಾರೋಡ್‌ನ ಗಟ್ಟಿ ಸಮಾಜ ಭವನದಲ್ಲಿ ನಡೆಯುತ್ತಿರುವ ಕೃಷಿ ಮೇಳ ಮತ್ತು ದೇಸಿ ಆಹಾರ ಮೇಳ ಇನ್ನೆರಡು ದಿನಗಳ ಕಾಲ ವಿಜೃಂಭಣೆಯಿಂದ ಮುಂದುವರಿಯಲಿದೆ. ಕೃಷಿ ಕ್ಷೇತ್ರಕ್ಕೆ ಪೂರಕವಾಗುವ ನವೀನ ತಂತ್ರಜ್ಞಾನ ಉಪಕರಣಗಳು, ಗೊಬ್ಬರ, ಬೀಜ, ಹಾಗೂ ಕೃಷಿ ಯಂತ್ರೋಪಕರಣಗಳಿಂದ ಹಿಡಿದು ರೈತರ ಜೀವನವನ್ನು ಸುಧಾರಿಸಲು ನೆರವಾಗುವ ಹಲವು ವಸ್ತುಗಳು ಇಲ್ಲಿ ಪ್ರದರ್ಶನಕ್ಕಿರುತ್ತವೆ. ದೇಸಿ ಆಹಾರ ಮೇಳದಲ್ಲಿ ವಿವಿಧ ಪ್ರದೇಶಗಳ ವಿಶಿಷ್ಟ ಸಾಂಪ್ರದಾಯಿಕ ರುಚಿಗಳನ್ನು ಪರಿಚಯಿಸುತ್ತಿದ್ದು, ಸ್ಥಳೀಯ ಆಹಾರ ಸಂಸ್ಕೃತಿಯ ವೈಭವವನ್ನು ಜನರು ಆಸ್ವಾದಿಸುತ್ತಿದ್ದಾರೆ. ಜೊತೆಗೆ, ವಸ್ತ್ರ ಮಳಿಗೆಗಳು, ಹಸ್ತಕಲೆ ವಸ್ತುಗಳು, ಮತ್ತು ನೈಸರ್ಗಿಕ ಉತ್ಪನ್ನಗಳ ಮಾರಾಟವೂ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮೇಳದ ಪ್ರಮುಖ ಆಕರ್ಷಣೆಯಾಗಿ ವಿವಿಧ ತಳಿಯ ಪಕ್ಷಿಗಳ ಪ್ರದರ್ಶನ, ಮತ್ಸ್ಯ ಮೇಳ ಹಾಗೂ ಹೂ ಬೆಳೆಗಳ ಪ್ರದರ್ಶನಗಳು ಜನಮನ ಗೆದ್ದಿವೆ. ರೈತರ ಜೊತೆಗೆ ಸಾಮಾನ್ಯ ನಾಗರಿಕರೂ ಸಹ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಮೇಳವು ಉತ್ಸವದಂತೆಯೇ ಚೈತನ್ಯಭರಿತ ವಾತಾವರಣವನ್ನು ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ರೈತರು ಮತ್ತು ಯುವ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಮೂಲಕ ಸ್ವಾವಲಂಬನೆಯ ಹೊಸ ದಾರಿ ತೆರೆದಿದ್ದಾರೆ. ಕೃಷಿ ಮೇಳವು ಕೇವಲ ವ್ಯಾಪಾರ ಅಥವಾ ಪ್ರದರ್ಶನದ ವೇದಿಕೆಯಾಗಿರದೆ, ರೈತರ ಜ್ಞಾನ ವಿನಿಮಯ ಮತ್ತು ನವೀನ ಆಲೋಚನೆಗಳ ಹಂಚಿಕೆಗೆ ಒಂದು ಸಾರ್ಥಕ ವೇದಿಕೆಯಾಗಿದೆ.
