ಉಳ್ಳಾಲ: 21 ವಿದ್ಯಾರ್ಥಿಗಳಿಂದ ಆರಂಭ ಕಂಡ 43 ವರ್ಷಗಳ ಇತಿಹಾಸವಿರುವ ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳು ಜತೆಯಾಗುತ್ತಿದ್ದಾರೆ. ಸವಿನೆನಪು ಇದು ಹಳೇ ನೆನಪುಗಳ ಮೆಲುಕು ಅನ್ನುವ ಕಾರ್ಯಕ್ರಮದಡಿ 1996 ಎಸ್‌ಎಸ್‌ಎಲ್‌ಸಿ ಬ್ಯಾಚ್ ಮತ್ತು 1996-2002 ಹಳೇಯ ದಿನಗಳನ್ನು ನ.7 ರಂದು ಮೆಲುಕು ಹಾಕಲಿದ್ದಾರೆ.
ಕಾಲ ಬದಲಾದರೂ, ಕೆಲವು ನೆನಪುಗಳು ಕಾಲದ ಗಾಳಿ ತಾಕದಂತೆಯೇ ಅಚ್ಚಳಿಯದೆ ಉಳಿಯುತ್ತವೆ. ಆ ನೆನಪುಗಳಲ್ಲಿ ಸಂತ ಸೆಬಾಸ್ತಿಯನ್ನರ ಪ್ರೌಢಶಾಲೆ, ಪೆರ್ಮನ್ನೂರು ಒಂದಾಗಿದೆ. ಕೇವಲ 21 ವಿದ್ಯಾರ್ಥಿಗಳೊಂದಿಗೆ 1983ರಲ್ಲಿ ಆರಂಭವಾದ ಈ ವಿದ್ಯಾಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಜೀವನ ರೂಪಿಸಿಕೊಳ್ಳುವತ್ತ ದಾರಿಯನ್ನು ಮಾಡಿಕೊಡುತ್ತಲೇ ಇದೆ. ವಂ. ಫಾ. ಹೆರಾಲ್ಡ್ ಡಿಸೋಜ, ಫಾ. ಪೀಟರ್ ಸೆರಾವೊ, ಹಾಗೂ ಅನೇಕ ಸಂಚಾಲಕರ, ಪ್ರಾಂಶುಪಾಲರ, ಶಿಕ್ಷಕರ ಅಹೋರಾತ್ರಿ ಶ್ರಮದಿಂದ ಈ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣ ಗುರುತನ್ನು ಮೂಡಿಸಿದೆ. ಸಂತ ಸೆಬಾಸ್ತಿಯನ್ನರ ವಿದ್ಯಾಸಂಸ್ಥೆಯ ಬೆಳವಣಿಗೆಯ ಹಾದಿಯಲ್ಲಿ ಅನೇಕ ಧರ್ಮಗುರುಗಳು ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. 25 ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಧಾರೆಯೆರೆಯಲು ಫಾ. ಪೀಟರ್ ಸೆರಾವೋ , ಫಾ. ಥಾಮಸ್ ಡಿಸೋಜ, ಫಾ. ಜೆ.ಬಿ ಸಲ್ದಾನ , ಫಾ. ಸಿಪ್ರಿಯನ್ ಪಿಂಟೋ ಧರ್ಮಗುರುಗಳ ದೃಷ್ಟಿಯೇ ಸಂಸ್ಥೆಯ ಬೆಳವಣಿಗೆಯ ದೀಪದ ಜೊತೆಗೆ ಅವರ ಆಶೀರ್ವಾದವೇ ವಿದ್ಯಾರ್ಥಿ ಜೀವನದ ಬೆಳಕಾಗಿತ್ತು ಅನ್ನುವುದು ಹಳೇಯ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
ಶಾಲೆಯ ಮೈದಾನ, ಗಂಟೆ ಶಬ್ದ, ಮಧ್ಯಾಹ್ನದ ಬಿಸಿಯ ಸಮಯದಲ್ಲಿ ಮರದ ನೆರಳಲ್ಲಿ ಕುಳಿತು ಮಾತನಾಡಿದ ಕತೆಗಳು, ವಾರ್ಷಿಕೋತ್ಸವದ ಸಿದ್ಧತೆಗಳು ಇವೆಲ್ಲವೂ ಇಂದು ಕಣ್ಮುಂದೆ ಜೀವಂತವಾಗುತ್ತಿವೆ ಅನ್ನುವ ಹಳೇಯ ವಿದ್ಯಾರ್ಥಿಗಳ ಸವಿನೆನಪು ಕಾರ್ಯಕ್ರಮ ನ.7 ರಂದು ಸಂಜೆ 4.30 ಕ್ಕೆ ಶಾಲಾ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮ ಅಧ್ಯಕ್ಷತೆಯನ್ನು ತೊಕ್ಕೊಟ್ಟು ಸಂತ ಸಬಾಸ್ಟಿಯನ್ನರ ಚರ್ಚ್ ಧರ್ಮಗುರುಗಳು ರೆ| ಫಾ| ಸಿಪ್ರಿಯನ್ ಪಿಂಟೋ ವಹಿಸಲಿದ್ದಾರೆ.
ಗೌರವಾಧ್ಯಕ್ಷತೆಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ , ಬೆಂಗಳೂರು ಯು.ಟಿ. ಹಲೀಮ ಮೆಮೋರಿಯಲ್ ಟ್ರಸ್ಟ್ ಚೇರ್‌ಮೆನ್ ಝುಲಿಕರ್ ಅಲಿ ಅಹ್ಮದ್
ಯುವ ಉದ್ಯಮಿ ಪ್ರಕಾಶ್ ಕುಂಪಲ (, ಬೆಂಗಳೂರು), ಇಸ್ರೇಲ್ ನ ಉದ್ಯಮಿ ಜಾನ್ ಕಿಶೋರ್ ಡಿಸೋಜ , ಯುವ ಉದ್ಯಮಿ ಹಿಮೆನ್ ಮೈಸೂರು, ಶಾಲಾ ಮುಖ್ಯೋಪಾಧ್ಯಾಯಿನಿ ಅವಿಟ ಮರಿಯ ಡಿಸೋಜ , ಅತಿಥಿಗಳಾಗಿ ಹಳೇ ವಿದ್ಯಾರ್ಥಿಗಳಾದ ಬೆಂಗಳೂರು ಎಚ್.ಎಸ್.ಬಿ.ಸಿ ಬ್ಯಾಂಕ್‌ನ ನಿರ್ದೇಶಕಿ ಕವಿತ ಶೆಟ್ಟಿ (ಶಾಲಾ ವಿದ್ಯಾರ್ಥಿ ನಾಯಕಿ-1999), ವಕೀಲರು ಪವನ್ ಕುಮಾರ್ ಜೆ.ಪಿ., ವಾಣಿಶ್ರೀ ಎಸ್.ಗಟ್ಟಿ (ಮಂಗಳೂರು ಇನ್ಫೋಸಿಸ್ ಟೆಕ್ನಾಲಜೀಸ್ ಪ್ರಾಜೆಕ್ಟ್ ಮ್ಯಾನೇಜರ್ ಹೆಕ್ಸಾವೇರ್ ಟೆಕ್ನಾಲಜೀಸ್ ಐ.ಟಿ. ಲೀಡ್ ಡಿ.ಎಂ.ಅಬೂಬಕ್ಕರ್ ಸಿದ್ದೀಕ್ ಭಾಗವಹಿಸಲಿದ್ದಾರೆ.