
ಉಳ್ಳಾಲ: ಸಂತ ಸೆಬಾಸ್ತಿಯನ್ನರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಸಂಘವು 1996–2002 ಬ್ಯಾಚ್ ಸಹಯೋಗದೊಂದಿಗೆ ನವೆಂಬರ್ 7, 2025 ಶುಕ್ರವಾರದಂದು ಶಾಲಾ ಸಭಾಂಗಣದಲ್ಲಿ “ಸವಿನೆನಪಿನ ಸಂಜೆ – ಹಳೆಯ ನೆನಪುಗಳ ಮೆಲುಕು” ಕಾರ್ಯಕ್ರಮವನ್ನು ಆಯೋಜಿಸಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸಿಹಿ ಕ್ಷಣಗಳನ್ನು ನೆನೆದು, ಶಾಲೆಯೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಸೆಬಾಸ್ತಿಯನ್ನರ ಚರ್ಚ್ ತೊಕ್ಕೊಟ್ಟು ಪಾರಿಷ್ ಧರ್ಮಗುರು ರೆ| ಫಾ| ಸಿಪ್ರಿಯನ್ ಪಿಂಟೋ ವಹಿಸಲಿದ್ದು, ಗೌರವಾಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾ. ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ಧರಾಮಯ್ಯ, ಯು.ಟಿ. ಹಲೀಮ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಚೇರ್‌ಮನ್ ಝುಲ್ಫೀಕರ್ ಅಲಿ ಅಹ್ಮದ್, ಯುವ ಉದ್ಯಮಿ ಪ್ರಕಾಶ್ ಕುಂಪಲ, ಜಾನ್ ಕಿಶೋರ್ ಡಿಸೋಜ, ಮೈಸೂರಿನ ಉದ್ಯಮಿ ಹಿಮೆನ್, ಶಾಲಾ ಮುಖ್ಯೋಪಾಧ್ಯಾಯಿನಿ ಅವಿಟ ಮರಿಯಾ ಡಿಸೋಜ ಸೇರಿದಂತೆ ಅತಿಥಿಗಳಾಗಿ ಹೆಚ್‌ಎಸ್‌ಬಿಸಿ ಬ್ಯಾಂಕ್ ನಿರ್ದೇಶಕಿ ಕವಿತಾ ಶೆಟ್ಟಿ, ಇನ್ಫೋಸಿಸ್ ಟೆಕ್ನಾಲಜೀಸ್ ಪ್ರಾಜೆಕ್ಟ್ ಮ್ಯಾನೇಜರ್ ವಾಣಿಶ್ರೀ ಎಸ್. ಗಟ್ಟಿ, ಹೆಕ್ಸಾವೇರ್ ಟೆಕ್ನಾಲಜೀಸ್ ಐಟಿ ಲೀಡ್ ಡಿ.ಎಂ. ಅಬೂಬಕರ್ ಸಿದ್ದೀಕ್, ವಕೀಲ ಪವನ್ ಕುಮಾರ್ ಜೆ.ಪಿ ಭಾಗವಹಿಸಲಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಧಕರಿಗೆ ಸನ್ಮಾನ ಹಾಗೂ ಕರಾವಳಿಯ ಖ್ಯಾತ ಗಾಯಕರಿಂದ ರಂಗೋಲಿ ಮೆಲೋಡೀಸ್ ರಸಮಂಜರಿ ಸಂಗೀತ ಸಂಭ್ರಮವನ್ನು ತುಂಬಲಿದೆ. ಹಳೆಯ ನೆನಪುಗಳನ್ನು ಪುನರುಜ್ಜೀವನಗೊಳಿಸಿ, ಹಳೆಯ ಸ್ಪರ್ಶವನ್ನು ಮರಳಿ ನೀಡುವ ಉದ್ದೇಶದೊಂದಿಗೆ ಎಲ್ಲ ಹಳೆಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಂಘದಿಂದ ಆಹ್ವಾನಿಸಲಾಗಿದೆ.