Site icon Ullalavani

ಕರ್ನೂಲ್ ದುರಂತ; ಬೆಂಗಳೂರಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಸಾವು..!

ಬೆಂಗಳೂರು, ಅಕ್ಟೋಬರ್​ 24: ಆಂಧ್ರ ಪ್ರದೇಶದ ಕರ್ನೂಲ್​ ಸಮೀಪ ಅಗ್ನಿ ದುರಂತದಿಂದ ಖಾಸಗಿ ಬಸ್  ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ ಬೆಂಗಳೂರಲ್ಲಿ ನೆಲೆಸಿದ್ದ ಕುಟುಂಬ ಸೇರಿ 20 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಂದು (ಅ.24)ರ ಬೆಳಗಿನ ಜಾವ ಸಂಭವಿಸಿರೋ ಅನಾಹುತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಗೊಳ್ಳ ರಮೇಶ್​ ಕುಟುಂಬ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಆಂಧ್ರದ ನೆಲ್ಲೂರು ಮೂಲದವರಾಗಿದ್ದ ರಮೇಶ್​, ಪತ್ನಿ ಅನುಷಾ, ಮಕ್ಕಳಾದ ಶಶಾಂಕ್ ಮತ್ತು ಮನ್ವಿತಾ ಜೊತೆ ಇದೇ ಬಸ್​ ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್​​ ಹೊತ್ತಿ ಉರಿದಾಗ ಹೊರಬರಲಾಗದೆ ನಾಲ್ವರೂ ದುರ್ಮರಣ ಹೊಂದಿದ್ದಾರೆ.

ಘಟನೆಯಲ್ಲಿ ಬೆಂಗಳೂರಿನ ಖಾಸಗಿ ಕಂಪೆನಿಯ ಸಾಫ್ಟ್‌ವೇರ್ ಎಂಜಿನಿಯರ್ ಕೂಡ ಸಾವನ್ನಪ್ಪಿದ್ದಾರೆ. ಮೇಘನಾಥ್(24) ಮೃತರಾಗಿದ್ದು, ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದ ಮೇಘನಾಥ್ ಮರಳಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಮೇಘನಾಥ್​ ಸುಶೀಲಾ ಮತ್ತು ಭಾಸ್ಕರಾಚಾರಿ ದಂಪತಿಯ ಏಕೈಕ ಪುತ್ರನಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇರುವ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡು ಹೆತ್ತವರು ಕಂಗಾಲಾಗಿದ್ದಾರೆ.

41 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಮೊದಲು​ ಬೈಕ್​ ಗೆ ಡಿಕ್ಕಿಯಾಗಿದ್ದು, ಆ ಬಳಿಕ ಬಸ್​ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕೆಲವರು ಹೊರಹಾರಿ ಪ್ರಾಣ ಉಳಿಸಿಕೊಂಡಿದ್ದರೆ ಹಲವರು ಬೆಂಕಿ ಕೆನ್ನಾಲೆಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಘಟನೆ ಬಗ್ಗೆ ಕರ್ನಾಟಕ ಸಿಎಂ ಸಂತಾಪ ವ್ಯಕ್ತಪಡಿಸಿದ್ದು, ಬಸ್‌ಗೆ ಬೆಂಕಿ‌ ತಗುಲಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಸುದ್ದಿ ಕೇಳಿ ಅತೀವ ದುಃಖವಾಯಿತು. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Exit mobile version