ಮಂಗಳೂರು, ಅ.22: ರಸ್ತೆ ಬದಿ ಕಸ ಎಸೆಯಬೇಡಿ ಅನ್ನುತ್ತಾ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ನಿಂತು ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ ಅನ್ನುವ ಏಕಾಂಗಿ ಅಭಿಯಾನ ಕೈಗೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸಮಾಜಸೇವಕ ನಾಗರಾಜ್ ಬಜಾಲ್ ಇದೀಗ ರಜೆ ಸಿಕ್ಕಿದೆ..! ವೇಸ್ಟ್ ಮಾಡಲ್ಲ ಅನ್ನುತ್ತಾ ಕಾರವಾರದಿಂದ ಮಂಗಳೂರಿನ ವರೆಗೆ ಹಸಿರು ನಡಿಗೆ ಪ್ರತೀ ಹೆಜ್ಜೆಗೂ ಸ್ವಚ್ಛತೆ ಅನ್ನುವ ಹೊಸ ಅಭಿಯಾನ ನಡೆಸುವ ತೀರ್ಮಾನಕ್ಕೆ ಕೈ ಹಾಕಿದ್ದಾರೆ.
ಹಲವು ವರ್ಷಗಳ ಹಿಂದೆ ನಾಗರಾಜ್ ಬಜಾಲ್ ನೇತ್ರಾವತಿ ಸೇತುವೆ ಮೇಲೆ ನಿಂತು ಏಕಾಂಗಿಯಾಗಿ ಹಲವು ದಿನಗಳ ಹೋರಾಟ ನಡೆಸಿ ರಸ್ತೆ ಬದಿಯಲ್ಲಿ, ನೇತ್ರಾವತಿ ನದಿಗೆ ತ್ಯಾಜ್ಯ ಎಸೆಯದಂತೆ ಏಕಾಂಗಿ ಹೋರಾಟ ನಡೆಸಿದ್ದರು. ಅಲ್ಲಿ ನಾಮಫಲಕಗಳನ್ನು ಅಳವಡಿಸಲು ಕಾರಣರಾದ ನಾಗರಾಜ್ ಬಜಾಲ್, ಹಲವು ವರ್ಷಗಳ ನಂತರ ಮತ್ತೆ ಪಡೀಲ್ ಸಮೀಪ ಹೋರಾಟವನ್ನು ಕೈಗೊಂಡಿದ್ದರು. ಈ ಕುರಿತು ಸಂಸದ ಬ್ರಿಜೇಶ್ ಚೌಟ ಅವರು ಹೋರಾಟದ ಬಳಿ ತೆರಳಿ ನಾಗರಾಜ್ ಅವರ ಬೆನ್ನು ತಟ್ಟಿದ್ದರು. ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಾಗರಾಜ್ ಬಜಾಲ್ ಇವರು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಿ ನೂರಾರು ಜೀವಗಳ ಉಳಿವಿಗೆ ಕಾರಣಕರ್ತರಾದವರು. ಹಲವಾರು ಸಂಘಸ0ಸ್ಥೆಗಳು ಇವರ ಸಮಾಜ ಸೇವೆಯನ್ನು ಗುರುತಿಸಿ ನೂರಾರು ಸನ್ಮಾನ, ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ದಾಖಲೆಯ ಉದ್ದೇಶವಲ್ಲ; ಸ್ವಚ್ಛತೆಯ ಉದ್ದೇಶ ದಾಖಲೆ ಸೃಷ್ಟಿಸಲು ಹಾತೊರೆಯುತ್ತಿರುವ ಈ ಕಾಲಘಟ್ಟದಲ್ಲಿ ಇವರು ಸ್ವಚ್ಛತೆಗಾಗಿ ಹಾಗೂ ತ್ಯಾಜ್ಯಗಳನ್ನ ರಸ್ತೆ ಬದಿಗಳಲ್ಲಿ ಬಿಸಾಡುವುದನ್ನು ನಿಲ್ಲಿಸುವ ಉದ್ದೇಶದಿಂದ ಗಾಂಧಿ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡು ಯಾವುದೇ ದಾಖಲೆ ಸೃಷ್ಠಿಯ ಉದ್ದೇಶವಿಲ್ಲದೇ ಅಕ್ಟೋಬರ್ 27 ರಿಂದ ಕಾರವಾರದಿಂದ ಮಂಗಳೂರು ತನಕ ರಾಷ್ಟ್ರೀಯ ಹೆದ್ದಾರಿ ಹಾಗೂ ಕಡಲ ಕಿನಾರೆಯ ಮಾರ್ಗವಾಗಿ ಒಬ್ಬಂಟಿಯಾಗಿ ಕಾಲ್ನಡಿಗೆಯ ಮೂಲಕ ಪ್ರಯಾಣ ಆರಂಭಿಸಲಿದ್ದಾರೆ.
ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಮತ್ತು ಅರಿವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಪಾದಯಾತ್ರೆ ನಡೆಸಲಿದ್ದಾರೆ. ಈ ನಡಿಗೆಯ ವೇಳೆ ಸ್ಥಳೀಯ ಆಡಳಿತಾಧಿಕಾರಿಗಳು, ಹೆದ್ದಾರಿಯಲ್ಲಿ ಸಿಗುವ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕರೊಂದಿಗೆ ತ್ಯಾಜ್ಯ ನಿರ್ವಹಣೆ ಕುರಿತ ಸಂವಾದಗಳನ್ನು ನಡೆಸುವ ಉದ್ದೇಶವನ್ನು ಸಮಾಜಸೇವಕ ನಾಗಾರಾಜ್ ಹೊಂದಿದ್ದಾರೆ. ಜೊತೆಗೆ ಕರಾವಳಿ ಭಾಗದಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಉತ್ತಮ ಮಾದರಿಗಳನ್ನು ಕಲಿಯುವುದು, ಸಮುದ್ರಗಳಿಗೆ ಹೋಗುವ ಪ್ಲಾಸ್ಟಿಕ್ ತಡೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸುವುದು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದೂ ಈ ಪ್ರಯತ್ನದ ಭಾಗವಾಗಿದೆ ಎಂದು ಸಮಾಜ ಸೇವಕ ನಾಗಾರಾಜ್ ತಮ್ಮ ಇನ್ಸಾ÷್ಟಗ್ರಾಂ ಖಾತೆಯಲ್ಲಿ ಪೋಸ್ಟರ್‌ವೊಂದರಲ್ಲಿ ತಿಳಿಸಿದ್ದಾರೆ.