ದಕ್ಷಿಣ ಕನ್ನಡ: ಸಾರ್ವಜನಿಕರ ತೆರಿಗೆ ಹಣವನ್ನು ಅಭಿವೃದ್ಧಿ ಹೆಸರಿನಲ್ಲಿ ಸಂಗ್ರಹಿಸಿ ಬೇಕಾಬಿಟ್ಟಿಯಾಗಿ ವ್ಯಯಿಸುವುದು ಸರಕಾರಕ್ಕೆ ಚಾಳಿಯಾಗಿ ಬಿಟ್ಟಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಮಾತಿಗೆ ನಿದರ್ಶನವೇ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಛೇರಿಯ ಮುಂಭಾಗದಲ್ಲಿನ ದೃಶ್ಯ.
ಜನರು ಕಷ್ಟಪಟ್ಟು ತೆರಿಗೆ ಕಟ್ಟಿ ಕೊಟ್ಟ ಹಣದಿಂದ ಸರ್ಕಾರಿ ಅಧಿಕಾರಿಗಳಿಗೆ ಉತ್ತಮ ವಾಹನ ಸೌಕರ್ಯ ಕಲ್ಪಿಸಲು ಖರೀದಿಸಿದ ಆಧುನಿಕ ಕಾರುಗಳು ಬಿಸಿಲಿನ ಶಾಖಕ್ಕೆ ತತ್ತರಿಸಿದಂತೆ ಭಾಸವಾಗುತ್ತಿವೆ. ಧೂಳು, ಕಲ್ಮಶಗಳಿಂದ ತುಂಬಿ, ಗುಜಿರಿ ಗುಜಿರಿಯಾಗಿ ಹೋಗಿವೆ. ಇದನ್ನು ನೋಡುವ ಸಾರ್ವಜನಿಕರ ಬವಣೆ ಹೇಳತೀರದ್ದಾಗಿದೆ.
ಸಾರ್ವಜನಿಕರ ತೆರಿಗೆ ಹಣಕ್ಕಿಲ್ಲವೇ ಬೆಲೆ..??
ಸಾಮಾನ್ಯ ಜನರು ಹಳೆಯ ವಾಹನಗಳಲ್ಲಿ ಪ್ರಯಾಣಿಸುತ್ತೇವೆ. ಕಷ್ಟದಿಂದ ಪರಿಶ್ರಮದಿಂದ ಗಳಿಸಿದ ಹಣವನ್ನು ತೆರಿಗೆಯಾಗಿ ಕಟ್ಟುತ್ತೇವೆ. ಆ ಹಣದಿಂದ ಸರ್ಕಾರ ಉನ್ನತ ಅಧಿಕಾರಿಗಳಿಗೆ ಐಷಾರಾಮಿ ವಾಹನಗಳನ್ನು ಕೊಡುಗೆಯಾಗಿ ನೀಡುತ್ತದೆ. ಆದರೆ ಅಧಿಕಾರಿಗಳು ಅದನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಬಿಸಿಲು, ಮಳೆ, ಧೂಳಿನಲ್ಲಿ ಬಿಟ್ಟುಬಿಡುತ್ತಾರೆ. ವಾಹನಗಳನ್ನು ತೊಳೆಯುವುದಿಲ್ಲ, ರಿಪೇರಿ ಮಾಡುವುದಿಲ್ಲ. ಇದರಿಂದ ವಾಹನಗಳು ಬೇಗ ಹಾಳಾಗುತ್ತವೆ. ಸರ್ಕಾರಿ ಹಣದ ದುರ್ಬಳಕೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಏನು? ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಅಧಿಕಾರಿಗಳಿಗೆ ಮೋಜು-ಮಸ್ತಿಗಾಗಿ ಅವರ ಖಾಸಗಿ ವಾಹನಗಳಿರಬಹುದು. ಹಾಗಂತ ಜನರ ಹಣದಿಂದ ಖರೀದಿಸಿದ ವಾಹನಗಳನ್ನು ಇಂತಹ ಬೇಜಾವಬ್ದಾರಿ ತನದಿಂದ ಗುಜಿರಿ ಸ್ಥಿತಿಯಲ್ಲಿ ನಿಲ್ಲಿಸುವುದು ಸರಿಯಲ್ಲ. ಇದು ಕೇವಲ ವಾಹನದ ಸಮಸ್ಯೆಯಲ್ಲ, ಜವಾಬ್ದಾರಿಯ ಕೊರತೆಯ ಸಂಕೇತ. ಅಧಿಕಾರಿಗಳೇ, ನೀವು ಸ್ವಲ್ಪ ಇತ್ತ ಗಮನ ಹರಿಸಿ. ವಾಹನಗಳನ್ನು ತೊಳೆದು, ರಿಪೇರಿ ಮಾಡಿ ಇಟ್ಟುಕೊಳ್ಳಲು ಆಗುವುದಿಲ್ಲವೇ?
ಇದರಿಂದ ವಾಹನಗಳ ಆಯಸ್ಸು ಹೆಚ್ಚುತ್ತದೆ. ಸರ್ಕಾರಿ ಹಣ ಉಳಿಯುತ್ತದೆ. ಜನರ ಬೆವರಿನ ಹಣಕ್ಕೆ ಗೌರವ ಕೊಡಿ ಎಂದು ಸಾರ್ವಜನಿಕರು ವಿಷಾದ ವ್ಯಕ್ತಪಡಿಸಿದ್ದಾರೆ.
