Site icon Ullalavani

ಯುವಕನೋರ್ವನಿಗೆ ವಿದ್ಯುತ್ ಶಾಕ್..!! ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ..!!

ಕುಂಬಳೆ:ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸುವ ನಿಟ್ಟಿನಲ್ಲಿ ಮನೆಯ ಚಾವಡಿಯಲ್ಲಿ ಗೂಡು ದೀಪ ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ, ಯುವಕನೋರ್ವ ಅರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸುವ ದಾರಿ
ಮಧ್ಯೆ ನಿಧನರಾದ ಘಟನೆ ನಿನ್ನೆ ರಾತ್ರಿ ಕುಂಬಳೆ ಬಳಿಯ ಪುತ್ತಿಗೆಯಲ್ಲಿ ನಡೆದಿದೆ.

ಪುತ್ತಿಗೆ ನಿವಾಸಿ ಬಡಗಿ ವೃತ್ತಿ ಮಾಡುತ್ತಿರುವ ನಾಗೇಶ್ ಆಚಾರ್ಯ – ಹೇಮಲತಾ ದಂಪತಿ ಪುತ್ರ ರಾಜೇಶ್ ಆಚಾರ್ಯ (37) ಮೃತಪಟ್ಟ ಯುವಕನಾಗಿದ್ದಾನೆ. ಮರದ ಕೆತ್ತನೆ ಕೆಲಸ ಮಾಡುತ್ತಿರುವ ರಾಜೇಶ್ ಆಚಾರ್ಯರು ದೀಪಾವಳಿ ಅಂಗವಾಗಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಪಟಾಕಿ ಜೊತೆ ಗೂಡು ದೀಪ ತಂದಿದ್ದರು. ಮನೆ ಮಂದಿ ಮನೆಯೊಳಗೆ ಟಿವಿ ವೀಕ್ಷಿಸುತ್ತಿದ್ದರು. ಈ ವೇಳೆ ಗೂಡುದೀಪವನ್ನು ಮನೆಯ ಚಾವಡಿಯಲ್ಲಿ ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿದೆ. ಶಬ್ದ ಕೇಳಿದ ಹಿನ್ನಲೆಯಲ್ಲಿ ಮನೆಯವರು ಹೊರಗೆ ಬಂದಾಗ ರಾಜೇಶ್ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು. ಸಹೋದರ ಕಿರಣ್ ಆಚಾರ್ಯ ಹಾಗೂ ಸ್ಥಳೀಯರು ಕೂಡಲೇ ರಾಜೇಶ್ ರನ್ನು ಕುಂಬಳೆಯ ಸರಕಾರಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ರಾಜೇಶ್ ಆಚಾರ್ಯರು ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಶವ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಅಪರಾಹ್ನದ ವೇಳೆ ಮನೆಗೆ ತರಲಾಗುವುದು. ಬಳಿಕ ಕಟ್ಟತ್ತಡ್ಕ ವಿಕಾಸ್ ನಗರದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಮಂಜೇಶ್ವರ ಉದ್ಯಾವರ ಮೊರ್ಕಳ ನಿವಾಸಿ ಪವಿತ್ರ ಎಂಬವರನ್ನು ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಮಕ್ಕಳಾದ: ಪ್ರನ್ವಿತಾ, ಧನ್ವಿತ್, ಸಹೋದರ ಕಿರಣ್ ಆಚಾರ್ಯ ಪುತ್ತಿಗೆ ಎಂಬವರನ್ನು ಅಗಲಿದ್ದಾರೆ. ಮೃತರ ಸಹೋದರ ಪೈಕಿ ಪ್ರವೀಣ್ ಕುಮಾರ್ ಮೂರು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಮೃತಪಟ್ಟ ರಾಜೇಶ್ ಆಚಾರ್ಯ ಪುತ್ತಿಗೆ ಎಸ್.ಕೆ.ಎಸ್ ಕ್ಲಬ್ ನ ಸಕ್ರಿಯ ಸದಸ್ಯರಾಗಿದ್ದಾರೆ. ದೀಪಾವಳಿಯ ಸಂಭ್ರಮದಲ್ಲಿದ್ದ ಮನೆ ಈಗ ಸ್ಮಶಾನ ಮೌನ ಆವರಿಸಿದೆ.

Exit mobile version