ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ವಾರದೊಳಗೆ ವಿವಾಹ ನಿಶ್ಚಯವಾಗಬೇಕಿದ್ದ ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ನವೀನ್ ಮೊಂತೇರೊ(32) ಸೋಮೇಶ್ವರ ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ವೇಳೆ ನಡೆದಿದೆ. ಇದೇ ವೇಳೆ ಕೆರೆ ಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದೆ.
ಟೂರಿಸ್ಟ್ ವಾಹನದ ಮಾಲಕರೂ ಚಾಲಕರಾಗಿದ್ದ ನವೀನ್ ಮೊಂತೇರೊ ತೊಕ್ಕೊಟ್ಟು ಜಂಕ್ಷನ್‍ನ ಟೂರಿಸ್ಟ್ ವಾಹನಗಳ ಚಾಲಕರು ಮಾಲಕರೊಂದಿಗೆ ಸೋಮೇಶ್ವರ ಬೀಚ್‍ಗೆ ತೆರಳಿದ್ದು, ನವೀನ್ ಅವರೊಂದಿಗೆ ಕೆರೆಗೆ ಇಳಿದಿದ್ದ ನಿತಿನ್, ಸುನಿಲ್, ಮುಜಾಹಿದ್ಧೀನ್, ರಾಜೇಶ್ ರಕ್ಷಣೆ ಮಾಡಲಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ.
ಭಾರತ್ ಬಂದ್ ಹಿನ್ನಲೆಯಲ್ಲಿ ತೊಕ್ಕೊಟ್ಟು ಜಂಕ್ಷನ್‍ನ ಟೂರಿಸ್ಟ್ ವಾಹನ ಚಾಲಕರು ಮತ್ತು ಮಾಲಕರು ಮಧ್ಯಾಹ್ನದ ಬಳಿಕ ತೊಕ್ಕೊಟ್ಟು ಮೈದಾನದಲ್ಲಿ ವಾಲಿಬಾಲ್ ಆಟವಾಡಿ ಬಳಿಕ ಸುಮಾರು 20 ಜನ ತಂಡ ಸಂಜೆ ವೇಳೆಗೆ ಸೋಮೇಶ್ವರ ಬೀಚ್‍ಗೆ ತೆರಳಿದ್ದರು. ಬೀಚ್‍ನಲ್ಲಿ ಆಟವಾಡಿದ ಬಳಿಕ ಸೋಮೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆ ಇಳಿದು ಸ್ನಾನ ಮಾಡಿ ಮೊಬೈಲ್‍ಗಳಲ್ಲಿ ಫೋಟೊ ತೆಗೆದು ಎಲ್ಲರೂ ನೀರಿನಿಂದ ಮೇಲೆ ಬಂದಿದ್ದರು. ಆದರೆ ನವೀನ್ ಮತ್ತು ಇತರ ನಾಲ್ವರು ಎರಡನೇ ಬಾರಿಗೆ ಕೆರೆಗೆ ಇಳಿದಿದ್ದು, ಈ ವಿಚಾರ ಉಳಿದವರಿಗೆ ತಿಳಿದಿರಲಿಲ್ಲ. ಈ ಸಂದರ್ಭದಲ್ಲಿ ನವೀನ್ ಆಯತಪ್ಪಿ ಕೆರೆಗೆ ಬಿದ್ದಿದ್ದು, ನವೀನ್‍ನನ್ನು ರಕ್ಷಣೆ ಮಾಡಲು ಉಳಿದ ನಾಲ್ವರು ಕೆರೆಗೆ ಇಳಿದಿದ್ದರೂ, ಸರಿಯಾಗಿ ಈಜು ಬಾರದ ನವೀನ್ ಮತ್ತು ಸಂಗಡಿಗರು ಮುಳುಗೇಳುತ್ತಿದ್ದನ್ನು ಅಲ್ಲೇ ಇದ್ದ ಇತರ ಗೆಳೆಯರು ನೋಡಿದ್ದು ರಕ್ಷಣೆಗೆ ಮುಂದಾದರು.
ರಕ್ಷಿಸಿದ ಸಂತೋಷ್ :
ಕೆರೆಯಲ್ಲಿ ಮುಳುಗುತ್ತಿರುವುದನ್ನು ಕಂಡ ನವೀನ್ ಸ್ನೇಹಿತ ಆಡಂಕುದ್ರು ನಿವಾಸಿ ಸಂತೋಷ್ ನೋಡಿ ರಕ್ಷಣೆಗೆ ಕೆರೆಗೆ ಹಾರಿದ್ದು,ಮೂವರನ್ನು ರಕ್ಷಿಸಿದ ಎನ್ನಲಾಗಿದೆ. ಆದರೆ ನವೀನ್ ಅದಾಗಲೇ ಕೆರೆಯಲ್ಲಿ ಮುಳುಗಿದ್ದು ಆತನನ್ನು ರಕ್ಷಿಸಲು ಸ್ನೇಹಿತರು ಹರಸಾಹಸ ಮಾಡಿದರೂ ಆಸ್ಪತ್ರೆಗೆ ತರುವ ಮಧ್ಯೆ ಮೃತಪಟ್ಟಿದ್ದ ಎನ್ನಲಾಗಿದೆ.
ಐವರು ಮಕ್ಕಳಲ್ಲಿ ನವೀನ್ ಮೊಂತೇರೋ ಕಿರಿಯವನಾಗಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಕೊನೆಯ ಸಹೋದರಿಗೆ ವಿವಾಹವಾಗಿದ್ದು, ಎಪ್ರಿಲ್ ತಿಂಗಳಲ್ಲಿ ನವೀನ್ ಅವರಿಗೆ ವಿವಾಹ ನಿಶ್ಚಯ ಸಮಾರಂಭ ನಡೆಯಲಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ,