Site icon Ullalavani

ಭಾರತ್ ಬಂದ್ ಗೆ ಉಳ್ಳಾಲದಾದ್ಯಂತ ಮಿಶ್ರ ಪ್ರತಿಕ್ರಿಯೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 10 ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಉಳ್ಳಾಲದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಬೀರಿ, ಕಿನ್ಯಾ, ತಲಪಾಡಿ, ದೇರಳಕಟ್ಟೆ, ಎಲಿಯಾರುಪದವು, ಇನೋಳಿ, ಹರೇಕಳ, ಪಾವೂರು, ಕೊಣಾಜೆ, ಮುಡಿಪು, ಬೋಳಿಯಾರು, ಇರಾ, ಕುರ್ನಾಡು, ನಾಟೆಕಲ್ ಪ್ರದೇಶಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಕುತ್ತಾರು ಬಳಿ ನಸುಕಿನ ಜಾವ ವಾಹನಗಳು ತೆರಳದಂತೆ ಡಿವೈಎಫ್‍ಐ ಕಾರ್ಯಕರ್ತರು ಟಯರಿಗೆ ಬೆಂಕಿ ಹಾಕಿದ್ದು, ಬಳಿಕ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಒಳಪ್ರದೇಶಗಳಲ್ಲಿ ರಿಕ್ಷಾ ಸಂಚಾರ ಇದ್ದರೆ, ನಗರ ಪ್ರದೇಶಗಳಲ್ಲಿ ರಿಕ್ಷಾ ಸಂಚಾರವೂ ವಿರಳವಾಗಿತ್ತು. ಜನಖಾಸಗಿ ವಾಹನಗಳಲ್ಲಿ ಅಧಿಕವಾಗಿ ತೆರಳಿ ಕೆಲಸ ಕಾರ್ಯಗಳನ್ನು ಪೂರೈಸಿದರು. ಈ ಭಾಗದದ್ಯಂತ ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್‍ಗೊಳಿಸಿದ ಪರಿಣಾಮ ಜನ ಬಂದ್‍ಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿರುವುದು ಕಂಡುಬಂತು. ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಶಾಂತಿಯುತ ವಾತಾವರಣಕ್ಕಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಸಿಐಟಿಯು ಪ್ರತಿಭಟನೆ:
ಕಾರ್ಮಿಕರ ಹೆಸರಿನಲ್ಲಿ ಮತ ಪಡೆದಿರುವ ಕೇಂದ್ರ ಸರಕಾರ ಅವರ ವಿರುದ್ಧವೇ ನೀತಿಗಳನ್ನು ಜಾರಿಗೆ ತಂದು ಅವರನ್ನು ಸಂಕಷ್ಟದಲ್ಲಿರಿಸಿದ್ದು, ಇದರಿಂದ ಇಂದು ಕೇಂದ್ರದ ವಿರುದ್ಧ ಕಾರ್ಮಿಕರು ಕರೆ ನೀಡಿರುವ ಬಂದ್ ಯಶಸ್ವಿಯಾಗಿದೆ ಎಂದು ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ಮುಖಂಡ ಜೀವನ್ ರಾಜ್ ಕುತ್ತಾರ್ ಹೇಳಿದ್ದಾರೆ.

ಭಾರತ್ ಬಂದ್ ಪ್ರಯುಕ್ತ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಿಐಟಿಯು ಉಳ್ಳಾಲ ವಲಯದ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಕಳೆದ ಒಂದು ತಿಂಗಳಿಂದ ಪೂರ್ವಭಾವಿಯಾಗಿ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೂ ಯಾವುದೇ ಪ್ರತಿಕ್ರಿಯೆ ಸರಕಾರದಿಂದ ಸಿಗದ ಹಿನ್ನೆಲೆಯಲ್ಲಿ ದೇಶದ 10 ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದೆ.

ಇದಕ್ಕೆ ದೇಶಾದ್ಯಂತ ಕಾರ್ಮಿಕರು ಬೆಂಬಲ ಸೂಚಿಸಿ ಯಶಸ್ವಿಗೊಳಿಸಿದ್ದಾರೆ. ಸಾರಿಗೆ ನೀತಿಯಿಂದ ವಾಹನದ ಚಾಲಕರು ಹಾಗೂ ಬಸ್ಸು ಸಿಬ್ಬಂದಿ ದುಡಿಯುವುದೇ ಅಸಾಧ್ಯ. ಕನಿಷ್ಟ ರೂ.15,000 ವೇತನವನ್ನು ಕಾರ್ಮಿಕರಿಗೆ ಸಿಗುವ ನೀತಿಯನ್ನು ಜಾರಿಗೊಳಿಸಿದಲ್ಲಿ ಅವರು ದುಬಾರಿ ಬೆಲೆಯ ಸಮಾಜದಲ್ಲಿ ಬಾಳಲು ಸಾಧ್ಯ ಎಂದರು.

ಈ ಸಂದರ್ಭ ಸಿಐಟಿಯು ಮುಖಂಡರಾದ ಜಯಂತ್ ನಾಯ್ಕ್, ಸಿಪಿಐಎಂ ಮುಖಂಡ ಮಹಾಬಲ.ಟಿ.ದೆಪ್ಪೆಲಿಮಾರ್, ಪದ್ಮಾವತಿ.ಯಸ್.ಶೆಟ್ಟಿ, ಬಾಬು ಪಿಲಾರ್, ವಿಲಾಸಿನಿ ತೊಕ್ಕೊಟ್ಟು, ಡಿವೈಎಫ್ ಐ ಮುಖಂಡರಾದ ಅಶೋಕ್ ಶೆಟ್ಟಿ, ರೋಹಿದಾಸ್ ಭಟ್ನಗರ, ಸುನೀಲ್ ತೇವುಲ ಮೊದಲಾದವರು ಉಪಸ್ಥಿತರಿದ್ದರು.

Exit mobile version