Site icon Ullalavani

ಉಳ್ಳಾಲ ಕಸಾಪದಿಂದ ಕಾರಂತ ಜನ್ಮದಿನಾಚರಣೆ ಕಾರಂತರದ್ದು ಮುಚ್ಚುಮರೆಯಿಲ್ಲದ ವ್ಯಕ್ತಿತ್ವ : ಧನಂಜಯ ಕುಂಬ್ಳೆ

ಉಳ್ಳಾಲ : ಶಿವರಾಮ ಕಾರಂತರು ನಿತ್ಯ ಸಂಚಾರಿಯಾಗಿದ್ದವರು. ಮಾತಿನಲ್ಲೂ ಧಾರಾಳಿಯಾಗಿದ್ದವರು. ಆದರೆ ಅವರ ಮಾತಿಗೆ ಮುಗ್ಧತೆಯಿತ್ತು. ನಿಷ್ಕಪಟತೆಯಿತ್ತು. ಸತ್ಯವನ್ನು ಮುಖಕ್ಕೆ ರಾಚುವಂತೆ ಹೇಳುವ ಧೈರ್ಯವಿತ್ತು. ಆದ್ದರಿಂದ ಕೆಲವರಿಗೆ ಅವರು ನಿಷ್ಠುರ ಅನಿಸಿರಬಹುದು ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.

ಅವರು ಶುಕ್ರವಾರ ದ.ಕ ಜಿಲ್ಲಾ‌ ಕಸಾಪ ಉಳ್ಳಾಲ ತಾಲೂಕು ಘಟಕದ ವತಿಯಿಂದ ದೇರಳಕಟ್ಟೆಯ ಕಂಫರ್ಟ್ಸ್ ಇನ್ ಸಭಾಂಗಣದಲ್ಲಿ ನಡೆದ ಶಿವರಾಮ ಕಾರಂತ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಮಾಡಿ ಮಾತನಾಡಿದರು. ಕನ್ನಡ ಗದ್ಯ ಬರವಣಿಗೆಗೆ ತಮ್ಮ ಕಾದಂಬರಿಗಳ ಮೂಲಕ ಹೊಸ ತೇಜಸ್ಸನ್ನು ತಂದು ಕೊಟ್ಟ ಕಾರಂತರು ವಾಸ್ತವವಾದಿ ಅನುಭವನಿಷ್ಟ ಬರಹಗಾರರು. ದಲಿತಪರವಾದ ಮಾನವೀಯ ಅಂತ:ಕರಣ ಅವರದ್ದಾಗಿತ್ತು ಎಂದರು.

ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ ಬಹು ಆಸಕ್ತಿಗಳ ಕಾರಂತರು ಸಮಾಜದ ಏಳ್ಗೆಗಾಗಿ ಹಂಬಲಿಸಿದವರು ಎಂದರು. ಕಸಾಪ ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮಿ ಪ್ರಸಾದ್ ರೈ ಕಳ್ಳಿಮಾರ್ ಮಾತನಾಡಿ ಕಾರಂತರು ಕನ್ನಡ ಸಾಹಿತ್ಯದ ಅಮೂಲ್ಯ ರತ್ನ ಎಂದರು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕಂಪರ್ಟ್ಸ್ ಇನ್ ಮಾಲಿಕ‌ ಲಯನ್ ಚಂದ್ರಹಾಸ ಶೆಟ್ಟಿ, ಸಾಮಾಜಿಕ ಮುಖಂಡ ಪ್ರಸಾದ್ ರೈ ಕಲ್ಲಿಮಾರ್,ಕವಿ ಗುಣಾಜೆ ರಾಮಚಂದ್ರ ಭಟ್, ಸ್ವರ್ಣಲತಾ ರೈ, ಸಂಘಟನಾ ಕಾರ್ಯದರ್ಶಿಗಳಾದ ತ್ಯಾಗಂ ಹರೇಕಳ, ರಾಧಾಕೃಷ್ಣ ರಾವ್, ಶಿಕ್ಷಕ‌ ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.

Exit mobile version