Site icon Ullalavani

ತಲಪಾಡಿ ಅಕ್ಷಯ ಫಾರ್ಮ್ಸ್‌ ದಟ್ಟ ಕಾಡಿನಲ್ಲಿ ಕೊಲೆಯೋ? ಆತ್ಮಹತ್ಯೆಯೋ? ಕಳೇಬರ ಪತ್ತೆ, ನಾಪತ್ತೆಯಾಗಿದ್ದ ವಲಸೆ ಕಾರ್ಮಿಕನ ದೇಹದ ಶಂಕೆ

ತಲಪಾಡಿ : ಅಪರಿಚಿತ ಮೃತದೇಹದ ಕಳೇಬರ ತಲಪಾಡಿ ಸಮೀಪದ ದೇವಿಪುರ ರಸ್ತೆಯ ಅಕ್ಷಯ ಫಾರ್ಮ್‌ನ ಪೊದೆಗಳಲ್ಲಿ ಪತ್ತೆಯಾಗಿದ್ದು, ಲುಂಗಿಯೊಂದು ಮರದಲ್ಲಿ ಕಟ್ಟಿರುವ ಸ್ಥಿತಿಯಲ್ಲಿರುವುದರಿಂದ ನೇಣುಬಿಗಿದು ಸತ್ತಿರುವ ಶಂಕೆಯಿದೆ. ಸ್ಥಳದಲ್ಲಿ ಸಿಕ್ಕ ಮೊಬೈಲ್‌ ಸಿಮ್‌ ಆಧಾರದಡಿ ಮಂಜೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ವಲಸೆ ಕಾರ್ಮಿಕನಾಗಿರುವ ಶಂಕೆಯಿದೆ. ಎಫ್‌ ಎಸ್‌ ಎಲ್‌ ವರದಿ ಬಳಿಕ ದೃಢವಾಗಲಿದೆ. ಮರಕ್ಕೆ ಕಟ್ಟಿರುವ ಲುಂಗಿಯನ್ನು ಆಧರಿಸಿ ಇದೊಂದು ಕೊಲೆ ನಡೆಸಿ ನೇತುಹಾಕಿದ್ದಾರೆಂಬ ಶಂಕೆಯೂ ವ್ಯಕ್ತವಾಗಿದೆ.
ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರಿನ ಫರ್ನೀಚರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ರಾಹುಲ್ ಕುಮಾರ್ (17) ಆ.7 ರಂದು ನಾಪತ್ತೆಯಾಗಿದ್ದರು.) ಈ ಕುರಿತು ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರಿಂದ ಯಾವುದೇ ಶೋಧ ಕಾರ್ಯಗಳು, ತನಿಖೆ ನಡೆಯದೇ ಇದ್ದುದರಿಂದ ಮೃತದೇಹ ಸಾಕ್ಷ್ಯವಿಲ್ಲದ ಬರೀ ಕಳೇಬರ ಪತ್ತೆಯಾಗುವಂತಾಗಿದೆ.


ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಅದು ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತಿತ್ತು. ಮರದ ಗೆಲ್ಲಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿತ್ತು. ಬರ್ಮುಡ ಚಡ್ಡಿಯಲ್ಲಿ ಮೊಬೈಲ್ ಫೋನ್ ಕೂಡ ಪತ್ತೆಯಾಗಿತ್ತು. ಇದೀಗ ತಲಪಾಡಿಯಲ್ಲಿ ಸಿಕ್ಕಿರುವ ಮಾನವನ ಅಸ್ಥಿಪಂಜರದ ಅವಶೇಷಗಳ ಜೊತೆಯಲ್ಲಿ ದೊರೆತ ಮೊಬೈಲ್ ಸಿಮ್ ಕಾರ್ಡ್ ಸಂಖ್ಯೆ ಮತ್ತು ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ರಾಹುಲ್ ಮೊಬೈಲ್ ಸಂಖ್ಯೆ ಪರಸ್ಪರ ತಾಳೆಯಾಗಿದ್ದು ಕಳೇಬರ ರಾಹುಲ್ ನದ್ದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಎಫ್ ಎಸ್ಎಲ್ ವರದಿ ಬಂದ ಬಳಿಕವೇ ಮೃತರ ಅಧಿಕೃತ ಗುರುತು ಪತ್ತೆಯಾಗಲಿದೆ. ಉಳ್ಳಾಲ ಪೊಲೀಸರು ಮತ್ತು ಸೋಕೊ ( ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡ ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನು ಸಂಸ್ಕರಿಸಿ ಎಫ್ಎಸ್ಎಲ್ ಪರಿಶೀಲನೆಗೆ ಕಳುಹಿಸಿದ್ದಾರೆ. ಅಕ್ಷಯ ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದು ಇದರೊಳಗೆ ಕುಂಜತ್ತೂರಿನ ವಲಸೆ ಕಾರ್ಮಿಕ ಹೇಗೆ ಬಂದ. ಸಾವು ಹೇಗಾಯಿತು‌.? ಆತ್ಮಹತ್ಯೆಯೋ..ಯಾರೋ ಕೊಂದು ಮರಕ್ಕೆ ನೇತು ಹಾಕಿದರೋ ಎಂಬಂತೆ ಉಳ್ಳಾಲ ಮತ್ತು ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version