ಉಳ್ಳಾಲ : ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಉಳ್ಳಾಲ ಸಮುದ್ರ ತೀರದ ಅಳಿವೆಬಾಗಿಲು ಬ್ರೇಕ್ ವಾಟರ್ ಕಲ್ಲುಗಳ ಮಧ್ಯೆ ಸಿಲುಕಿರುವುದನ್ನು ಉಳ್ಳಾಲ ಮೊಗವೀರಪಟ್ನ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು 3-4 ಕಿ.ಮೀ ದೂರ ಎತ್ತಿಕೊಂಡು ಸಾಗಿ ಆಂಬುಲೆನ್ಸ್ ವಾಹನಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರುಗಳಾದ ಯೋಗೀಶ್ ಅಮೀನ್, ಪ್ರಸಾದ್ ಸುವರ್ಣ, ಚಂದ್ರಹಾಸ್ ಸುವರ್ಣ ಎಂಬವರು ತೀರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೆಗಲ ಮೇಲೆ ಇಟ್ಟು ಆಂಬುಲೆನ್ಸ್ ವಾಹನಕ್ಕೆ ತಂದಿರಿಸಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಅಳಿವೆಬಾಗಿಲು ಕಲ್ಲುಗಳ ಮಧ್ಯೆ ಮೀನಿಗೆಂದು ಗಾಳ ಹಾಕುತ್ತಿದ್ದ ತಂಡಕ್ಕೆ ಕೊಳೆತ ಮೃತದೇಹ ಕಲ್ಲುಗಳ ಮಧ್ಯೆ ಸಿಲುಕಿರುವುದು ಗೋಚರಿಸಿದೆ. ತಕ್ಷಣ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಉಳ್ಳಾಲ ಪೋಲೀಸರು ಶಿವಾಜಿ ಜೀವರಾಕ್ಷಕ ಈಜುಗಾರರ ಸದಸ್ಯರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರಿಗೆ ತಂಡ ಸಹಕರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುಮಾರು 40-45ರ ಹರೆಯದ ವ್ಯಕ್ತಿಯ ಮೃತದೇಹ ಇದಾಗಿದ್ದು, ಇತ್ತೀಚೆಗೆ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆಂದು ತೆರಳಿದ್ದ ತಮಿಳು ಮುಲದ ವ್ಯಕ್ತಿ ದೋಣಿಯಿಂದ ಬಿದ್ದು ನಾಪತ್ತೆ ಆಗಿರುವ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ವ್ಯಕ್ತಿ ಆಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.