
ಬೆಂಗಳೂರು : ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಹಿರಿಯ ಕಾಂಗ್ರೆಸ್ ಮುಖಂಡ, ಹೆಬ್ರಿ ತಾಲೂಕು ಮುದ್ರಾಡಿಯ ಮಂಜುನಾಥ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಕಳೆದ 3 ದಶಕಗಳಿಂದ ನಿರಂತರವಾಗಿ ಪಕ್ಷದ ಕಾರ್ಯ ಮಾಡಿಕೊಂಡು ಬಂದಿರುವ ಮಂಜುನಾಥ ಪೂಜಾರಿ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಡೀಮ್ಸ್ ಫಾರೆಸ್ಟ್ ಕುರಿತಾಗಿ ಜನಪರ ಹೋರಾಟ ಮಾಡಿರುವ ಅವರು ಗ್ರಾಮೀಣ ಭಾಗದ ಜನರ ಸಹಾಯಕ್ಕಾಗಿ ಸಹಕಾರಿ ಸಂಘ ಸ್ಥಾಪಿಸಿದವರು. ರಾಜಕೀಯ ಕ್ಷೇತ್ರ ಮಾತ್ರವಲ್ಲದೆ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡ ಮಂಜುನಾಥ ಪೂಜಾರಿ ಅವರು ಎರಡು ಅವಧಿಗೆ ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಅನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿದ್ದರು. ತಾಲೂಕು ಬೋರ್ಡ್, ಜಿ.ಪಂ. ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಅವರದ್ದು. ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ, ಹೆಬ್ರಿ ತಾಲೂಕು ರಚನೆಗಾಗಿ ನಡೆದ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಅವರು ಹೆಬ್ರಿ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.