Site icon Ullalavani

ಮಕ್ಕಳು ಬೇಕೆ ಎನ್ನುವ ಪ್ರಶ್ನೆ ಬೇಡ, ಹೆಣ್ಣಿಗೆ ತಾಯ್ತನದಲ್ಲೇ ಜೀವನ ಸಾರ್ಥಕತೆ : ಕಜಂಪಾಡಿ ಸುಬ್ರಹ್ಮಣ್ಯ ಭಟ್ ಕಿನ್ಯಾ ಕೇಶವ ಶಿಶುಮಂದಿರದ ಆಶ್ರಯದಲ್ಲಿ 22ನೇ ವರ್ಷದ ನವ ದಂಪತಿ ಸಮಾವೇಶ

ಉಳ್ಳಾಲ: ಹಿಂದಿನ ಕಾಲದಲ್ಲಿ ಮಕ್ಕಳೆಷ್ಟು ಬೇಕೆನ್ನುವ ಪ್ರಶ್ನೆಯೇ ಇರಲಿಲ್ಲ. ಕಾಲ ಬದಲಾಗಿ ನಮ್ಮ‌ ದೃಷ್ಟಿಯೂ ಬದಲಾಗಿರುವುದು ದುರಂತ. ವಿವಾಹದ ನಂತರ ಮಕ್ಕಳು ಬೇಕು ಬೇಡ ಎಂಬ ಪ್ರಶ್ನೆಯೇ ಬರಲ್ಲ, ಮಕ್ಕಳನ್ನು ಪಡೆಯುವುದೇ ವಿವಾಹದ ಉದ್ದೇಶವಾಗಿದೆ. ನಮ್ಮ ವಂಶವು ನಿರ್ವಂಶವಾಗದೆ ಉಳಿಯಬೇಕಾದರೆ, ನಮ್ಮ ಮನೆತನದ ಫರ್ಟಿಲಿಟಿ ರೇಟ್ 2.1 ರಷ್ಟಾದರೂ ಇರಬೇಕೆಂಬುದು ವೈಜ್ಞಾನಿಕ ಸತ್ಯವಾಗಿದೆಯೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರು ಅಖಿಲ ಭಾರತೀಯ ಪರಿವಾರ ಪ್ರಭೋದನದ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು.


ಕಿನ್ಯಾ ಕೇಶವ ಶಿಶು ಮಂದಿರದ ಆಶ್ರಯದಲ್ಲಿ ತಲಪಾಡಿ ದೇವಿಪುರದ ಶ್ರೀ ದುರ್ಗಾ ಧ್ಯಾನ ಮಂದಿರದಲ್ಲಿ ಭಾನುವಾರದಂದು ನಡೆದ 22 ನೇ ವರುಷದ ನವದಂಪತಿಗಳ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಹೆಣ್ಣು ಗಂಡಿನ ನಡುವೆ ಪರಸ್ಪರ ಆಕರ್ಷಣೆಯು ಸಹಜ ಪ್ರಕ್ರಿಯೆಯಾಗಿದ್ದು, ಅಂತಹ ಆಕರ್ಷಣೆಗೆ ನೀಡುವ ಸುಸಂಸ್ಕೃತ ಸ್ವರೂಪವೇ ವಿವಾಹ ಬಂಧವಾಗಿದೆ. ಕರ್ತವ್ಯ ಪ್ರಜ್ನೆಯೊಂದಿಗೆ ಜವಬ್ದಾರಿ ಮೆರೆಯುವ ಗೃಹಸ್ಥಾಶ್ರಮಮೇ ಶ್ರೇಷ್ಟವೆಂದು ಚಾಣಕ್ಯನೆ ವರ್ಣಿಸಿದ್ದಾನೆ.ಧರ್ಮ ಮತ್ತು ಪ್ರಜಾ ಅಭಿವೃದ್ಧಿಯೆಂಬ ಸಂಕಲ್ಪದೊಂದಿಗೆ ಪತಿ ಪತ್ನಿ ಧರ್ಮದ ರಕ್ಷಣೆಗೆ ನಿಂತು ಸಮಾಜವನ್ನು ಉದ್ಧರಿಸುವ ಒಳ್ಳೆಯ ಮಕ್ಕಳನ್ನ‌ ಪಡೆಯಬೇಕಿದೆ. ಹಿಂದಿನ ಕಾಲದಲ್ಲಿ ಹೆಣ್ಣೊಬ್ಬಳು ಮದುವೆಯಾದ ಒಂದು ವರ್ಷದೊಳಗೆ ಗರ್ಭವತಿ ಆಗಬೇಕೆಂಬುದು ಸಿದ್ದಾಂತವಾಗಿತ್ತು. ಎಷ್ಟು ಮಕ್ಕಳು,ಎಂತಹ ಮಕ್ಕಳು ಬೇಕೆಂಬುದನ್ನ ದಂಪತಿಗಳು ಕುಳಿತು ಸಮಾಲೋಚಿಸಬೇಕು‌. ಹಿರಿಯರಲ್ಲಿ ಚರ್ಚಿಸಿ ಶಾಸ್ತ್ರ ಪ್ರಕಾರವಾಗಿ ಯೋಗ್ಯ ಸಮಯ, ಘಳಿಗೆಯಲ್ಲಿ ಗರ್ಭಧಾರಣೆಯಾದಲ್ಲಿ ಉತ್ತಮ ಸಂತಾನ ಪ್ರಾಪ್ತಿ ಸಾಧ್ಯ.ಮಕ್ಕಳಿರುವ ಮನೆಗಳಲ್ಲಿ ದು:ಖಕ್ಕೆ ಆಸ್ಪದ ಇರೋದಿಲ್ಲ.ಸತಿ ಪತಿಗಳ ನಡುವಿನ ವಿರಸವನ್ನ ಹೋಗಲಾಡಿಸಲು ಮಕ್ಕಳೇ ಸೇತುವಾಗುತ್ತಾರೆ ಎಂದರು.
ಆನಂದಾಶ್ರಮ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ರಾಮಚಂದ್ರ ಶೆಟ್ಟಿ ,ಹೇಮಲತಾ ದಂಪತಿ ಸಮಾವೇಶ ಉದ್ಘಾಟಿಸಿದರು.
ಕೇಶವ ಶಿಶು ಮಂದಿರದ ಗೌರವಾಧ್ಯಕ್ಷರಾದ ಶಿವರಾಮ ಶೆಟ್ಟಿ ಸಾಂತ್ಯಗುತ್ತು, ಅಧ್ಯಕ್ಷರಾದ ಸುಂದರ ಅಂಚನ್, ಉಪಾಧ್ಯಕ್ಷರಾದ ಶ್ರೀನಿವಾಸ್ ಗಟ್ಟಿ,ಸುಧಾಕರ ಆಳ್ವ ಸಾಂತ್ಯಗುತ್ತು, ಸಹ ವ್ಯವಸ್ಥಾಪಕರಾದ ರವಿ ಕನಕಮುಗೇರು, ಶಿಶು ಮಂದಿರದ ಮಾತಾಜಿ ಅಶ್ವಿನಿ ಲತೀಶ್ ಪಿಲಿಕೂರು, ನಿಕಟಪೂರ್ವ ಮಾತಾಜಿ ಶೋಭಾ ಕಜೆ, ಶಿಕ್ಷಣ ಪ್ರಮುಖರಾದ ಚೇತನ್ ಪಿಲಿಕೂರು ಮೊದಲಾದವರು ಉಪಸ್ಥಿತರಿದ್ದರು. ಕೇಶವ ಶಿಶು ಮಂದಿರದ ವ್ಯವಸ್ಥಾಪಕರಾದ ನಾರಾಯಣ ಕಜೆ ಸ್ವಾಗತಿಸಿ ,ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸದಾಶಿವ ಆಳ್ವ ದೇವಿಪುರ ನಿರೂಪಿಸಿದರು.


ನಮ್ಮ ದೇಶದ ಸಂಸ್ಕೃತಿಯಲ್ಲಿ ವಿಚ್ಚೇದನವೆಂಬ ವಿಚಾರವೇ ಇರಲಿಲ್ಲ. ಇಂದು ಪತಿ-ಪತ್ನಿಯರ ನಡುವೆ ಪರಸ್ಪರ ಹೊಂದಾಣಿಕೆಯ ಸಮಸ್ಯೆಗಳಿಂದಾಗಿ ಮದುವೆಯಾದ ಒಂದು ವರ್ಷದೊಳಗಡೆಯೇ ವಿಚ್ಚೇದನಗಳಾಗುತ್ತಿವೆ.ಈ ಸಮಸ್ಯೆಗಳನ್ನ ಹೋಗಲಾಡಿಸಲು ನವ ದಂಪತಿಗಳು ಧೃಢ ನಿರ್ಣಯ ತೆಗೆದುಕೊಳ್ಳಬೇಕಿದೆ. ಪತಿ-ಪತ್ನಿಯರು ಅಹಂ ಬಿಟ್ಟು ಕಣ್ಣುಗಳನ್ನ ಮಿಲಾಯಿಸಿ ಮಾತನಾಡಿ, ಪರಸ್ಪರ ನಗುವುದನ್ನ ರೂಢಿಸಬೇಕು. ಸಂಗಾತಿಯ ಬಗ್ಗೆ ನಕರಾತ್ಮಕ ಗ್ರಹಿಕೆಗಳನ್ನ ಬಿಟ್ಟು,ಸಕರಾತ್ಮಕ ವಿಚಾರಗಳನ್ನ ಮೆಚ್ಚಿ ಪ್ರೋತ್ಸಾಹಿಸಬೇಕು.ಆ ಮೂಲಕ ದಾಂಪತ್ಯವು ಗಟ್ಟಿಗೊಳ್ಳಲು ಸಾಧ್ಯ.
ಕಜಂಪಾಡಿ ಸುಬ್ರಹ್ಮಣ್ಯ ಭಟ್.


ನಾವೇನೇ ಗ್ರಹಿಸಿದ್ದರೂ ಸಹ ಮದುವೆ ಎನ್ನುವುದು ಸ್ವರ್ಗದಲ್ಲೇ ನಿರ್ಧರಿತವಾಗುತ್ತೆ.ಪಾಲಿಗೆ ಬಂದದ್ದು ಪಂಚಾಮೃತ ಮತ್ತು ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ಎರಡು ಮಾತುಗಳನ್ನ ದಂಪತಿಗಳು ಅರ್ಥೈಸಿದರೆ ಬದುಕು ಸುಂದರವಾಗಿರುತ್ತದೆ.ಜೀವನದ ಎಲ್ಲಾ ವ್ಯವಹಾರಗಳಲ್ಲೂ ಆರಂಭದ ದಿನಗಳಲ್ಲೆ ಪತಿಯು ಪತ್ನಿಯ ಜೊತೆ ನಿಂತಲ್ಲಿ ಜೀವನವಿಡೀ ಪತಿ-ಪತ್ನಿ ಸಂಬಂಧವು ಗಟ್ಟಿಯಾಗಿರುತ್ತದೆ.

ಕಶೆಕೋಡಿ ಸೂರ್ಯನಾರಾಯಣ ಭಟ್,ಧಾರ್ಮಿಕ ಚಿಂತಕರು.

Exit mobile version