Site icon Ullalavani

ಕುತ್ತಾರು ಶ್ರೀ ಕೊರಗಜ್ಜ ಕ್ಷೇತ್ರಉಚಿತ ಆರೋಗ್ಯ ಶಿಬಿರ: ಉಚಿತ ಸೇವೆಯ ಆಂಬ್ಯುಲೆನ್ಸ್‌ ಲೋಕಾರ್ಪಣೆ

ಉಳ್ಳಾಲ: ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವದ ಆದಿಸ್ಥಳ ಕುತ್ತಾರು ಆಶ್ರಯದಲ್ಲಿ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ (ರಿ) ಬಟ್ಟೆದಡಿ ಕುತ್ತಾರ್ ಮತ್ತು ಜೈ ಹನುಮಾನ್ ಮಹಿಳಾ ಸಮಿತಿ ಬಟ್ಟೆದಡಿ ಕುತ್ತಾರು ಇವರ ಸಹಕಾರದೊಂದಿಗೆ ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ದಂತ ಚಿಕಿತ್ಸಾ ಶಿಬಿರ ದೆಕ್ಕಾಡು ಶ್ರೀ ಕೊರಗತನಿಯ ದೈವದ ಆದಿಸ್ಥಳದಲ್ಲಿ ನಡೆಯಿತು.
ಇದೇ ವೇಳೆ ಭಕ್ತಾಧಿಗಳಿಗೆ ಮತ್ತು ಸ್ಥಳೀಯರ ಆರೋಗ್ಯ ರಕ್ಷಣೆಗೆ ನೆರವಾಗುವ ಉಚಿತ ಆಂಬ್ಯುಲೆನ್ಸ್ ವಾಹನವನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇಮ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್ ಶೆಟ್ಟಿ ಮಾತನಾಡಿ, ಸಕಾಲದಲ್ಲಿ ಆಂಬ್ಯುಲೆನ್ಸ್ ಸೇವೆ ದೊರೆತಲ್ಲಿ ರೋಗಿಯ ಪ್ರಾಣರಕ್ಷಣೆ ಸಾಧ್ಯ. ಗಾಯಗೊಂಡವರನ್ನು ಮತ್ತು ಅಸ್ವಸ್ಥರಾದವರನ್ನು ಯಾವ ವಾಹನದಲ್ಲಿ ಕೊಂಡೊಯ್ಯಲಾಗುತ್ತದೆ ಎಂಬುದು ಕೂಡಾ ಮುಖ್ಯವಾಗುತ್ತದೆ. ಅಪಘಾತದಲ್ಲಿ ಗಾಯಗೊಂಡವರನ್ನು ದ್ವಿಚಕ್ರ ವಾಹನ ಅಥವಾ ರಿಕ್ಷಾ, ಕಾರಿನಲ್ಲಿ ಕೊಂಡೊಯ್ದು ಸಂದರ್ಭ ಹಲವು ತೊಂದರೆಗೊಳಗಾಗುತ್ತದೆ. ಬಿ.ಪಿ ಹೆಚ್ಚಳ, ಸ್ಟ್ರೋಕ್ ಇಂತಹ ಸಂದರ್ಭಗಳಲ್ಲಿ ವಾಹನಗಳಲ್ಲಿ ಕುಳಿತ, ಮಲಗಿಸಿದ ಭಂಗಿ ಕೂಡಾ ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿ ಕ್ಷೇತ್ರದ ಆಂಬ್ಯುಲೆನ್ಸ್ ಪ್ರದೇಶದ ಜನರಿಗೆ ಸಹಾಯ ಬರುವುದು ಎಂದರು.
ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿದ ಡಿ.ಮಹಾಬಲ ಹೆಗ್ಡೆ ಮಾಗಣತ್ತಡಿ ಮಾತನಾಡಿ ಶ್ರೀ ಪಂಜಂದಾಯ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ. ಶ್ರೀಧರ್ ಶೆಟ್ಟಿ ಮಾಗಣತ್ತಡಿ ಯವರ ಬಹು ದಿನದ ಕನಸು ಇಂದು ನನಸಾಗಿದೆ. ಅದೇ ರೀತಿ ಅವರ ಇನ್ನೊಂದು ಮಹತ್ವಾಕಾಂಕ್ಷೆಯು ಆದಷ್ಟು ಶೀಘ್ರವೇ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಹಯೋಗದೊಂದಿಗೆ ಕ್ಷೇತ್ರದಲ್ಲಿ ಸ್ಪೆಷಲ್ ಕ್ಲಿನಿಕ್ ಶುಭಾರಂಭಗೊಳ್ಳುವ ನಿರೀಕ್ಷೆಯಿದೆ ಎಂದರು.
ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ, ಡಾ| ನರೇಶ್ ರೈ, ಡಾ| ತಾರಾ ಚಂದ್ರನ್, ಹಿರಿಯರಾದ ಪದ್ಮನಾಭ ಶೆಟ್ಟಿ ಗೇಣಿಮನೆ, ಚಂದ್ರಹಾಸ ಅಡ್ಯಂತಾಯ ಕುತ್ತಾರ್ ಗುತ್ತು, ಗೋಪಾಲಕೃಷ್ಣ ಮೇಲಾಂಟ ಬೊಲ್ಯ ಗುತ್ತು, ದೇವಿ ಪ್ರಸಾದ್ ಶೆಟ್ಟಿ, ಶ್ರೀ ರಾಮ್ ರೈ ಮಾಗಣತ್ತಡಿ, ಸತೀಶ್ ಅಗೆಲ, ಮುನ್ನೂರು ಗ್ರಾ.ಪಂ ಉಪಾಧ್ಯಕ್ಷ ಮಹಾಬಲ ಟಿ.ದೆಪ್ಪೆಲಿಮಾರ್, ಹರೀಶ್ ಭಂಡಾರ ಬೈಲ್, ಗಣೇಶ್ ಪೂಜಾರಿ, ಜೈ ಹನುಮಾನ್ ಕ್ರೀಡಾಮಂಡಳಿಯ ಅಧ್ಯಕ್ಷರಾದ ಚಂದ್ರಹಾಸ, ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾ ಶೇಖರ್, ಮುನ್ನೂರು ಗ್ರಾ.ಪಂ ಸದಸ್ಯರಾದ ಮುಸ್ತಾಫ .ಕೆ ಮುಂತಾದವರು ಹಾಗೂ ಊರ ಹಿತೈಷಿಗಳು ಉಪಸ್ಥಿತರಿದ್ದರು.
ಊರಿನ ಸುಮಾರು 300 ಕ್ಕೂ ಹೆಚ್ಚಿನ ಜನರು ಶಿಬಿರದ ಫಲಾನುಭವವನ್ನು ಪಡೆದುಕೊಂಡರು.
ವಂಶಿಕ್ ಸ್ವಾಗತಿಸಿದರು. ಚಂದ್ರಹಾಸ್ ಪ್ರಸ್ತಾವನೆಗೈದರು. ತೇಜಶ್ರೀ ಕಂಪ ನಿರೂಪಿಸಿದರು. ಪೃಥ್ವಿರಾಜ್ ವಂದಿಸಿದರು.

Exit mobile version