ಉಳ್ಳಾಲ : ಕರಾವಳಿಗರು ಏಕಮನಸ್ಸಿನಿಂದ ಆರಾಧಿಸುವ, ಆಸ್ವಾದಿಸುವ ಕಲೆ ಯಕ್ಷಗಾನ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕಥಾನಕಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿದ್ದು, ಯುವಕರಿಗೆ ಉತ್ತಮ ಸಂದೇಶ ನೀಡುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಭಾನುವಾರ ಆಯೋಜಿಸಲಾದ ‘ಯಕ್ಷಧಾರೆ’ ಯಕ್ಷಗಾನ ಕಾರ್ಯಕ್ರಮ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.
ಧ್ವನಿವರ್ಧಕ ಸಮಯಾವಕಾಶ ಕುರಿತು ವಿವಾದವೆದ್ದಿದ್ದು ಕಲಾಭಿಮಾನಿಗಳಲ್ಲಿ ಈ ಬಗ್ಗೆ ವಿಷಾದ ಇದೆ. ನವೆಂಬರ್ ನಲ್ಲಿ ಮೇಳಗಳು ತಿರುಗಾಟ ಆರಂಭಿಸುವುದರಿಂದ ಈ ಸಮಸ್ಯೆ ಬಗ್ಗೆ ಸರ್ಕಾರ ಈಗಲೇ ಗಮನಹರಿಸಬೇಕು. ಯಕ್ಷಗಾನ ಇಲ್ಲದೆ ಕರಾವಳಿಯಲ್ಲಿ ಕಾರ್ಯಕ್ರಮ ಕಳೆಗಟ್ಟಲು ಸಾಧ್ಯವಿಲ್ಲ ಎಂದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ.ಟಿ.ಶಾಮ ಭಟ್, ಶಾರದಾ ಗಣಪತಿ ವಿದ್ಯಾಕೇಂದ್ರದ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು.ಮೂಲ್ಯ, ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ, ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಗುರುರಾಜ್ ಭಟ್ ಕೈರಂಗಳ ಸ್ವಾಗತಿಸಿದರು. ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್. ಪ್ರಾಸ್ತಾವಿಕ ಮಾತನಾಡಿದರು. ಸಂಧ್ಯಾ ಗುರುರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗುರು ಅಶ್ವತ್ಥ್ ಮಂಜನಾಡಿ ವಂದಿಸಿದರು. ಬಳಿಕ ಪ್ರಸಿದ್ಧ ಕಲಾವಿದರಿಂದ ಚಕ್ರವ್ಯೂಹ-ವೀರಮಣಿ ಕಾಳಗ ತೆಂಕುತಿಟ್ಟು ಯಕ್ಷಗಾನ ನಡೆಯಿತು.
ಯಕ್ಷವಾಚಿಕ, ಆಹಾರ್ಯ ಪ್ರಸ್ತುತಿ :
ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಯಕ್ಷ ಗುರು ಸಬ್ಬಣಕೋಡಿ ರಾಮಭಟ್ ದೀಪ ಪ್ರಜ್ವಲಿಸಿದರು. ಕೈರಂಗಳ ದೇವಳ ಆಡಳಿತ ಮೊಕ್ತೇಸರ ತೋಡುಗುಳಿ ಮಹಾಬಲೇಶ್ವರ ಭಟ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಅಧ್ಯಕ್ಷ ಚಂದ್ರಹಾಸ ಕಣಂತೂರು ಉಪಸ್ಥಿತರಿದ್ದರು. ಬಳಿಕ ದಿ.ಬರೆ ಕೇಶವ ಭಟ್ ಸಂಸ್ಮರಣೆ, ಯಕ್ಷವಾಚಿಕ, ಯಕ್ಷ ಆಹಾರ್ಯ ಪ್ರಸ್ತುತಿ ನಡೆಯಿತು. ಮಧ್ಯಾಹ್ನ ಮೋಕ್ಷ ಸಂಗ್ರಾಮ ಬಡಗುತಿಟ್ಟು ಯಕ್ಷಗಾನ ನಡೆಯಿತು.