ಉಳ್ಳಾಲ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರ ಕೆಲವು ಪ್ರಮುಖ ಬೇಡಿಕೆಯ ಅಂಶಗಳನ್ನು ಪರಿಗಣಿಸುವಂತೆ ಹಾಗೂ ಬಿ.ಎಲ್.ಒ ಕರ್ತವ್ಯದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಉಚ್ಚಿಲದಲ್ಲಿ ಸಂಘದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ, ಗ್ರಾಮ ವ್ಯಾಪ್ತಿಯಲ್ಲೇ ನೇಮಿಸುವುದು, ಪ್ರಾಥಮಿಕ ಶಾಲಾ ಶಿಕ್ಷಕ ಗಣತಿದಾರರಿಗೆ ಪ್ರಾ ಥಮಿಕ ಶಾಲಾ ಮುಖ್ಯ ಶಿಕ್ಷಕರನ್ನೇ ಮೇಲ್ವಿಚಾರಕರಾಗಿ ನೇಮಿಸುವುದು, ತೀವ್ರ ಕಾಯಿಲೆ, ಗರ್ಭಿಣಿ ಶಿಕ್ಷಕಿಯರು, ಒಂದು ವರ್ಷದೊಳಗಿನ ಮಗುವಿರುವ ಶಿಕ್ಷಕಿಯರುಗಳಿಗೆ ಕಾರ್ಯದಿಂದ ವಿನಾಯಿತಿ ನೀಡುವುದು. ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡುವುದು, ನವರಾತ್ರಿ ಹಬ್ಬ ಆಚರಣೆಗೆ ಶಿಕ್ಷಕರಿಗೂ ಅವಕಾಶ ಮಾಡಿಕೊಟ್ಟು ನವರಾತ್ರಿಯ ನಂತರ ಸಮೀಕ್ಷಾ ಕಾರ್ಯಕ್ಕೆ ಅವಕಾಶ ಮಾಡುವುದು, ಗಣತಿ ಕಾರ್ಯದಲ್ಲಿ ನೇಮಕವಾಗಿರುವ ಶಿಕ್ಷಕರನ್ನು ಗಣತಿ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು, ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಮನೆ ಗುರುತಿಸಲು ಸಹಕಾರಿಯಾಗುವಂತೆ ಆಶಾ ಕಾರ್ಯಕರ್ತೆ ಅಥವಾ ಇತರೆ ಸಿಬ್ಬಂದಿಗಳನ್ನು ನೇಮಿಸುವಂತೆಯೂ ಹಾಗೂ ಬೇಸಿಗೆ ರಜೆಯಲ್ಲಿ ( ಮೇ 2025) ಜಾತಿ ಗಣತಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ‘ಕರ್ತವ್ಯ ಪ್ರಮಾಣ ಪತ್ರ ‘ ಹಾಗೂ ಸಂಭಾವನೆಯನ್ನು ಅತೀ ಶೀಘ್ರದಲ್ಲಿ ಒದಗಿಸುವುದು.
ಅದೇ ರೀತಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಚುನಾವಣಾ ಕರ್ತವ್ಯಗಳಿಗೆ ಆದ್ಯತೆ ಮೇರೆಗೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ , ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರ ಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಆದುದರಿಂದ ಈ ಆದೇಶದಂತೆ ಮುಂಚಿತವಾಗಿ ನೇಮಕ ಮಾಡಿರುವ ಎಲ್ಲಾ ಶಿಕ್ಷಕರ ಬಿ.ಎಲ್.ಒ ಕರ್ತವ್ಯದ ನಿಯೋಜನೆಯನ್ನು ರದ್ದುಗೊಳಿಸಿ ಶಿಕ್ಷಕರು ಸಂಪೂರ್ಣವಾಗಿ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಶಿವಪ್ರಸಾದ್ ರೈ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ ಮಂಜನಾಡಿ, ತಾಲೂಕು ಅಧ್ಯಕ್ಷರು ಹಾಗೂ ರಾಜ್ಯ ಉತ್ತಮ ಶಿಕ್ಷಕ ಪುರಸ್ಕೃತರು ಜಗದೀಶ್ ಶೆಟ್ಟಿ ಎಲಿಯಾಣ, ಕಾರ್ಯದರ್ಶಿ ವಿಮಲ್ ಕುಮಾರ್ ಕಡಬ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ , ಜೆಸಿಂತಾ, ಉಪಸ್ಥಿತರಿದ್ದರು.