ಉಳ್ಳಾಲ : ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ಮೀನುಗಾರಿಕಾ ಟ್ರಾಲರ್ ಬೋಟ್ ಆಳಸಮುದ್ರದಲ್ಲಿ ಎಂಜಿನ್ ವೈಫಲ್ಯದಿಂದ ಕೆಟ್ಟು ನಿಂತಿದ್ದು, ಪವಾಡಸದೃಶವಾಗಿ ಸಮುದ್ರದ ಅಲೆಗಳಿಂದಾಗಿ ತೇಲುತ್ತಾ ಉಳ್ಳಾಲದ ಸೀಗ್ರೌಂಡ್ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟಿನಲ್ಲಿದ್ದ 13 ಮಂದಿ ಮೀನುಗಾರರು ಬಹುದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಅಶ್ಫಾಕ್ ಎಂಬವರಿಗೆ ಸೇರಿದ ಬುರಾಕ್ ಟ್ರೋಲರ್ ಬೋಟ್ ಕೆಟ್ಟು ನಿಂತಿದೆ. ಮಂಗಳೂರಿನ ಧಕ್ಕೆಯಿಂದ ಕೇರಳ ಭಾಗಕ್ಕೆ ನಿನ್ನೆ ರಾತ್ರಿ ಆಳಸಮುದ್ರ ಮೀನುಗಾರಿಕೆಗೆಂದು ಬೋಟ್ ತೆರಳುತ್ತಿತ್ತು. ಈ ನಡುವೆ ಆಳಸಮುದ್ರದಲ್ಲಿ ಬೋಟ್ ಎಂಜಿನ್ ವೈಫಲ್ಯ ಉಂಟಾಗಿದ್ದು, ಮುಂದೆ ಸಾಗಲು ಅಸಾಧ್ಯವಾಗಿತ್ತು. ಮಧ್ಯರಾತ್ರಿಯಲ್ಲಿ ಬೋಟ್ ಕೆಟ್ಟು ನಿಂತ ಕುರಿತು ಉಳಿದ ಮೀನುಗಾರಿಗಾ ಬೋಟಿನವರ ಗಮನಕ್ಕೆ ಬಾರದೇ 13 ಮಂದಿ ಮೀನುಗಾರರು ಜೀವ ಕೈಯಲ್ಲಿಟ್ಟುಕೊಂಡು ಬೋಟಿನೊಳಕ್ಕೆ ಉಳಿದಿದ್ದರು. ಅಲೆಗಳಿಂದಾಗಿ ತೇಲುತ್ತಾ ಬಂದ ಬೋಟ್ ಇಂದು ನಸುಕಿನ ಜಾವ ಸೀಗ್ರೌಂಡ್ ಸಮುದ್ರತೀರಕ್ಕೆ ಬಂದು ಅಪ್ಪಳಿಸಿದೆ.
ಘಟನೆಯಿಂದಾಗಿ ಬೋಟ್ ಮಾಲೀಕರಿಗೆ ಲಕ್ಷಾಂತರ ನಷ್ಟವುಂಟಾಗಿದೆ. ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.