ಮಂಗಳೂರು: ನಗರ ಹೊರವಲಯದ ಕುಡುಪುವಿನಲ್ಲಿ ಎ.27ರಂದು ನಡೆದ ಕೇರಳ ವಯನಾಡಿನ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಕಾರ್ಪೊರೇಟರ್ ಪತಿ ರವೀಂದ್ರ ನಾಯಕ್ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಟಿಲ ಪ್ರಕರಣದಲ್ಲಿ ವಕೀಲರಾದ ವೈ ವಿಕ್ರಮ್ ಹೆಗ್ಡೆ ನಡೆಸಿದ ವಾದದಿಂದಾಗಿ ಜಾಮೀನು ಮಂಜೂರಾಗಿದೆ. ಪ್ರಕರಣ ಸಂಬಂಧ ಬಂಧಿತ ೨೦ ಆರೋಪಿಗಳಿಗೂ ಈವರೆಗೆ ಜಾಮೀನು ದೊರೆತಿಲ್ಲ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 482ರಡಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ, ನ್ಯಾಯಾಲಯವು ಮಂಗಳೂರಿನ ಗ್ರಾಮೀಣ ಪೊಲೀಸ್ ಠಾಣೆಯ ಕ್ರೈಂ ನಂ.37/2025ಕ್ಕೆ ಸಂಬಂಧಿಸಿದಂತೆ ಜೆಎಂಎಫ್‌ಸಿ ತೃತೀಯ ನ್ಯಾಯಾಲಯದಲ್ಲಿ ಪ್ರಚಲಿತದಲ್ಲಿರುವ ಸಿ.ಸಿ. ನಂ.4015/2025ರಲ್ಲಿ ಆರೋಪಿಗೆ ಬಂಧನವಾಗುವ ಸಂದರ್ಭ ಜಾಮೀನು ನೀಡಲು ಆದೇಶಿಸಿದೆ. ನ್ಯಾಯಾಲಯವು 1,00,000 ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಇಬ್ಬರು ಜಾಮೀನುದಾರರನ್ನು ಒದಗಿಸುವಂತೆ ಪ್ರತಿವಾದಿಗೆ ಸೂಚಿಸಿದೆ. ಜೊತೆಗೆ, ಸೆಪ್ಟೆಂಬರ್ 22, 2025ರೊಳಗೆ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಅದೇ ರೀತಿ, ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಾರದು, ಯಾವುದೇ ಅಪರಾಧದಲ್ಲಿ ತೊಡಗಿಕೊಳ್ಳಬಾರದು, ಅಥವಾ ಇದೇ ರೀತಿಯ ಮತ್ತೊಂದು ಅಪರಾಧ ಮಾಡಬಾರದು ಎಂದು ಶರತ್ತುಗಳನ್ನು ವಿಧಿಸಿದೆ. ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಚಾರ್ಜ್‌ಶೀಟ್ ದಾಖಲೆಗಳನ್ನು ವಕೀಲರಿಗೆ ಹಿಂತಿರುಗಿಸುವಂತೆ ನ್ಯಾಯಾಲಯ ಕಚೇರಿಗೆ ನಿರ್ದೇಶನ ನೀಡಲಾಗಿದೆ.
ಕುಡುಪುವಿನ ಮೈದಾನದಲ್ಲಿ 2025ರ ಏಪ್ರಿಲ್ 27ರಂದು ಅಶ್ರಫ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಪೈಕಿ ಪ್ರಕರಣದ ಆರೋಪಿಗಳಾದ ಅನಿಲ್ ಕುಮಾರ್, ಸಾಯಿದೀಪ್, ಅನಿಲ್ ಕುಮಾರ್, ಯತಿರಾಜ್, ಮನೀಶ್ ಶೆಟ್ಟಿ, ಪ್ರದೀಪ್, ವಿವಿಯನ್ ಆಲ್ವರಿಸ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಪ್ರಕರಣ ಏನು?
ಏ.27ರ ಭಾನುವಾರ ಸಂಜೆ 5:30ರ ಸುಮಾರಿಗೆ ಮಂಗಳೂರಿನ ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಮೃತದೇಹದ ಮರಣೋತ್ತರ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮೃತನ ಬೆನ್ನಿಗೆ ಬಲವಾದ ಹೊಡೆತ ಬಿದ್ದಿದೆ. ಗಂಭೀರ ಗಾಯಗೊಂಡ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿದೆ. ಅಪರಿಚಿತ ಮೃತದೇಹ ಅನುಮಾನಾಸ್ಪದವಾಗಿ ಸಿಕ್ಕಿದ ಹಿನ್ನಲೆಯಲ್ಲಿ ಬಿಸಿ ಬಿಸಿ ಚರ್ಚೆಗಳು ಅದಾಗಲೇ ಆರಂಭವಾಗಿತ್ತು. ಹಿಂದೂ ಯುವಕರು ಮುಸ್ಲಿಂ ಯುವಕನನ್ನು ಗುಂಪು ಹತ್ಯೆ ನಡೆಸಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಅಂತಾ ಸಿಪಿಐಎಂ, ಎಸ್‌ಡಿಪಿಐ ಪಕ್ಷಗಳು ಆರೋಪ ಮಾಡಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ನೈಜ ವಿಚಾರ ಗೊತ್ತಾಗಿದೆ. ಪ್ರಕರಣದಲ್ಲಿ ವಿರೋಧ ಪಕ್ಷಗಳು ಮನಪಾ ಕಾರ್ಪೊರೇಟರ್ ಪತಿ ರವೀಂದ್ರ ನಾಯಕ್ ಬಂಧನಕ್ಕೆ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಪ್ರಕರಣ ಸಂಬಂಧ ಜಾಮೀನು ದೊರೆತಿದೆ.
ಸಾಕ್ಷ್ಯಗಳ ನಡುವೆ ಕಾನೂನು ನಿಯಮಗಳ ಗೂಢಾರ್ಥ, ವಿರೋಧಿ ಪಕ್ಷದ ತೀವ್ರವಾದ ಪ್ರಶ್ನೆಗಳು – ಇವೆಲ್ಲವನ್ನೂ ಶಾಂತ ಮನಸ್ಸಿನಿಂದ ಎದುರಿಸಿ, ನಿಖರವಾದ ತರ್ಕ, ನಿಸ್ಸೀಮ ಪರಿಶ್ರಮ ಮತ್ತು ನ್ಯಾಯದ ಮೇಲಿನ ನಂಬಿಕೆಯೊಂದಿಗೆ ವಕೀಲರಾದ ವೈ ವಿಕ್ರಮ್ ಹೆಗ್ಡೆ ನಡೆಸಿದ ವಾದ ನಿಜಕ್ಕೂ ಪ್ರಭಾವಶಾಲಿಯಾಯಿತು. ತಾಳ್ಮೆ, ಅಧ್ಯಯನಶೀಲತೆ ಹಾಗೂ ಅಚಲ ಮನೋಬಲದೊಂದಿಗೆ ವಾದಿಸಿದ ವಕೀಲರ ಸಾಧನೆ ಅಸಾಧ್ಯವೆನಿಸಿದ ಜಟಿಲ ಪ್ರಕರಣದಲ್ಲೇ ಜಾಮೀನು ಲಭಿಸುವಂತೆ ಮಾಡಿದೆ.