Site icon Ullalavani

ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷರ ಕೊಲೆಯತ್ನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಚ್ಚಿಲ: ಅಕ್ರಮವಾಗಿ ಮನೆಗೆ ನುಗ್ಗಲು ಯತ್ನಿಸಿದ ಆರು ಮಂದಿ ಯುವಕರ ತಂಡ ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅವರಿಗೆ ತಲವಾರು ಬೀಸಿ ಕೊಲೆಗೆ ಯತ್ನಿಸಿರುವ ಘಟನೆ ಉಚ್ಚಿಲದ ನಿತ್ಯಾನಿಕೇತನದ ಮನೆಯಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಕಿನ್ಯಾ ನಿವಾಸಿ ಫಯಾನ್ , ನಾಝೀರ್ ಮಂಜನಾಡಿ, ರಫೀಕ್ ಮಂಜನಾಡಿ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ರಮೀಝ್, ತೈಸರ್, ರುಕ್ಸಾನ್ ಮಂಜನಾಡಿ ಎಂಬವರು ಪರಾರಿಯಾಗಿದ್ದಾರೆ. ಶುಕ್ರವಾರ ತಡರಾತ್ರಿ ವೇಳೆ ರಾಜೇಶ್ ಉಚ್ಚಿಲ್ ಅವರ ಮನೆಗೆ ಬಂದ ಆರೋಪಿಗಳು ಬಾಗಿಲು ಬಡಿದಿದ್ದರು. ಬಾಗಿಲು ತೆರೆಯಲು ಮುಂದಾಗುತ್ತಿದ್ದಂತೆ ಆರೋಪಿಗಳಲ್ಲಿ ಓರ್ವ ತಲವಾರು ಬೀಸಿದ್ದು, ರಾಜೇಶ್ ಅವರು ದಾಳಿಯಿಂದ ತಪ್ಪಿಸಿದ್ದಾರೆ. ಕೂಡಲೇ ವಿಚಾರ ಮನೆಮಂದಿಗೆ ತಿಳಿದಾಗ ಅವರು ಬೊಬ್ಬೆ ಹಾಕಲು ಆರಂಭಿಸುತ್ತಿದ್ದಂತೆ ಸ್ಥಳೀಯರು ಇವರ ಮನೆಗೆ ಓಡಿ ಬರುವಷ್ಟರಲ್ಲಿ ಆರೋಪಿಗಳೆಲ್ಲರೂ ಹೊರಗಡೆ ನಿಲ್ಲಿಸಿದ್ದ ಎರಡು ಬೈಕುಗಳಲ್ಲಿ ಪರಾರಿಯಾದರು. ಕೂಡಲೇ ರಾಜೇಶ್ ಬೀರಿ ಬಳಿಯಿರುವ ಸ್ನೇಹಿತರಿಗೆ ವಿಚಾರವನ್ನು ಮುಟ್ಟಿಸಿದ್ದು, ಅವರು ಒಂದು ಬೈಕನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು, ಅದರಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾದರೆ. ಕಿನ್ಯಾ ನಿವಾಸಿ ಫಯಾನ್‍ನನ್ನು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಹೆಸರು ಬಯಲುಗೊಂಡಿದೆ. ಈ ಪೈಕಿ ನಾಝೀರ್ ಮಂಜನಾಡಿ, ರಫೀಕ್ ಮಂಜನಾಡಿ ಎಂಬವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ , ರಾಜೇಶ್ ಉಚ್ಚಿಲ್ ಅವರ ಚಿಕ್ಕಪ್ಪನಾಗಿದ್ದು, ಇಬ್ಬರು ಒಂದೇ ಮನೆಯಲ್ಲಿದ್ದಾರೆ. ಆರೋಪಿಗಳು ಯಾರನ್ನು ಕೊಲ್ಲಲು ಮುಂದಾಗಿದ್ದರು ಅನ್ನುವುದು ವಿಚಾರಣೆಯಿಂದ ತಿಳಿದುಬರಬೇಕಿದೆ. 2004ರಲ್ಲಿ ಚಂದ್ರಶೇಖರ್ ಉಚ್ಚಿಲ್ ಅವರ ಹತ್ಯೆಗೆ ಮಾಡೂರು ಇಸುಬು ತಂಡದಿಂದ ಯತ್ನ ನಡೆದಿತ್ತು. ಅದರ ಕುರಿತ ಪ್ರಕರಣ ನ್ಯಾಯಾಲಯದಲ್ಲಿದ್ದು, ಸೆ.8 ರಂದು ವಿಚಾರಣೆ ನಡೆಯಲಿದೆ.

Exit mobile version