Site icon Ullalavani

ಅಮೃತ ಭಾರತ್ ಯೋಜನೆಯಡಿ ಬಂಟ್ವಾಳ ರೈಲು ನಿಲ್ದಾಣಕ್ಕೆ 28.49 ಕೋಟಿ ರೂ. ವೆಚ್ಚದಲ್ಲಿ ಹೊಸ ರೂಪ

ಬಂಟ್ವಾಳ : ಅಮೃತ ಭಾರತ್ ಯೋಜನೆಯಡಿ ದ.ಕ. ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣ ಅಭಿವೃದ್ಧಿ ಹೊಂದುತ್ತಿದ್ದು, ಕಳೆದ ಜನವರಿಯಿಂದೀಚೆಗೆ ಕಾಮಗಾರಿ ವೇಗ ಪಡೆದಿದೆ. 28.49 ಕೋಟಿ ರೂ. ವೆಚ್ಚದಲ್ಲಿ ನವವಿನ್ಯಾಸದೊಂದಿಗೆ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣಕ್ಕೆ ಹೊಸ ರೂಪ ನೀಡಲಾಗುತ್ತಿದೆ.

2024ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು, ಆಗಿನ ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕ ರಾಜೇಶ್ ನಾಯ್ಕ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಮೊದಲ ಹಂತದ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಇನ್ನು ಮೂರು, ನಾಲ್ಕು ತಿಂಗಳೊಳಗೆ ಯೋಜನೆಯ ಎಲ್ಲ ಕೆಲಸಗಳೂ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸದ್ಯ 28.49 ಕೋಟಿ ರೂ. ವೆಚ್ಚದಲ್ಲಿ ಹತ್ತು ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದೆ. ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್ ಕೌಂಟರ್ ನಿರ್ಮಾಣವಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್ ರೂಮ್ ವ್ಯವಸ್ಥೆ, ಒಂದು ಕೆಫೆಟೀರಿಯಾ, ಪ್ರತಿಯೊಂದು ಪ್ಲಾಟ್ ಫಾರ್ಮ್ ಗಳಲ್ಲಿ ಸುಸಜ್ಜಿತ ಶೌಚಾಲಯ, ಸ್ಟೇಷನ್ ಕಟ್ಟಡಕ್ಕೆ ಗ್ರಾನೈಟ್ ಹಾಸು, ಇತರ ಭಾಗಕ್ಕೆ ಕಾಂಕ್ರೀಟ್ ಮತ್ತು ಟೈಲ್ಸ್ ಅಳವಡಿಕೆಯಾಗಿದೆ. ಇಡೀ ರೈಲು ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವುದು ಯೋಜನೆಯಲ್ಲಿದೆ. ಎಲ್.ಇ.ಡಿ. ಡಿಸ್ಪ್ಲೇ ಮೂಲಕ ರೈಲುಗಳು ಬಂದು ಹೋಗುವ ಕುರಿತ ಮಾಹಿತಿ, ಕೋಚ್ ಎಲ್ಲಿ ನಿಲ್ಲುತ್ತದೆ ಎಂಬ ಕುರಿತು ಡಿಸ್ಪ್ಲೇ ಬೋರ್ಡ್ ಅಳವಡಿಕೆ, ಸ್ಟೇಶನ್ ನ ಮುಖದ್ವಾರ ಅಂದಗೊಳಿಸುವುದು. ಈ ಅಭಿವೃದ್ಧಿಯ ಪಟ್ಟಿಯಲ್ಲಿದ್ದು, ಇನ್ನೂ ಕಾಮಗಾರಿ ಆಗಬೇಕಿದೆ. ಈಗಾಗಲೇ ರೈಲು ನಿಲ್ದಾಣದ ವಿದ್ಯುದ್ದೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಈಗಾಗಲೇ ಫೂಟ್ ಓವರ್ ಬ್ರಿಡ್ಜ್ ಇದ್ದು, ಲಿಫ್ಟ್ ಅಳವಡಿಕೆ ಕೆಲಸ ಆಗಬೇಕಾಗಿದೆ. ರೈಲ್ವೆ ನಿಲ್ದಾಣದ ಪ್ರವೇಶದಲ್ಲಿ ವಾಹನ ಪಾರ್ಕಿಂಗ್ ಹಾಗೂ ಹುಲ್ಲುಗಾವಲು ವ್ಯವಸ್ಥೆ ಅಂತಿಮ ಹಂತದಲ್ಲಿದೆ. ಎರಡನೇ ಪ್ಲಾಟ್ ಫಾರ್ಮ್ ಕೂಡ ಸುಸಜ್ಜಿತವಾಗುವ ಹಂತದಲ್ಲಿದೆ.

ನಿಲ್ದಾಣವನ್ನು ಕೇವಲ ಸೌಂದರ್ಯಗೊಳಿಸುವುದೇ ಅಲ್ಲದೆ ಸುರಕ್ಷತೆಗೆ ಕೂಡ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇತ್ತೀಚೆಗೆ ಅಧಿಕಾರಿಗಳ ಭೇಟಿ ಸಂದರ್ಭ ಸಾರ್ವಜನಿಕರ ಮನವಿ ಮೇರೆಗೆ ಪೊಲೀಸ್ ಸಿಬ್ಬಂದಿ ಸುರಕ್ಷತೆಗೆ ನಿಯುಕ್ತರಾಗಿದ್ದಾರೆ. ಅನಧಿಕೃತವಾಗಿ ಪ್ಲಾಟ್ ಫಾರ್ಮ್ ಗಳಲ್ಲಿ ಸಂಚರಿಸುವುದು, ಅನುಮಾನಾಸ್ಪದವಾಗಿ ನಡೆದಾಡುತ್ತಿರುವುವವರನ್ನು ಹಿಡಿದು ವಿಚಾರಿಸುತ್ತಿದ್ದಾರೆ. ಅಲ್ಲದೆ, ಸುತ್ತಮುತ್ತ ಯಾವುದೇ ಅನಧಿಕೃತ ಚಟುವಟಿಕೆಗಳು ನಡೆಯದಂತೆ ಗಮನಹರಿಸಲು ಆರಂಭಿಸಿದ್ದಾರೆ. ಒಟ್ಟಿನಲ್ಲಿ ನಿಲ್ದಾಣ ಉನ್ನತ ಮಟ್ಟಕ್ಕೇರುತ್ತಿರುವುದು ಉತ್ತಮ ಸಂಗತಿಯೇ ಸರಿ.

Exit mobile version