ಅಮರಾವತಿ : 121 ಕೆ.ಜಿ. ಚಿನ್ನವನ್ನು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ದೇಣಿಗೆಯಾಗಿ ನೀಡಲು ಭಕ್ತರೊಬ್ಬರು ಮುಂದೆ ಬಂದಿದ್ದಾರೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಂಗಳವಾರ ತಿಳಿಸಿದ್ದಾರೆ.
ತಮ್ಮ ಉದ್ಯಮವು ಯಶಸ್ವಿಯಾಗಿರುವ ಕಾರಣಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಸುಮಾರು ₹140 ಕೋಟಿ ಮೌಲ್ಯದ ಈ ಚಿನ್ನವನ್ನು ಅವರು ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಮಂಗಳಗಿರಿಯಲ್ಲಿ ನಡೆದ ‘ಬಡತನ ನಿರ್ಮೂಲನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯ್ಡು, ‘ಕಂಪನಿಯೊಂದನ್ನು ಸ್ಥಾಪಿಸಲು ಬಯಸಿದ್ದ ಭಕ್ತರೊಬ್ಬರು, ಅದನ್ನು ಪ್ರಾರಂಭಿಸಿ ಉದ್ಯಮದಲ್ಲಿ ಯಶಸ್ವಿಯಾದರು. ಹಾಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ದೇಣಿಗೆ ನೀಡುತ್ತಿದ್ದಾರೆ’ ಎಂದಿದ್ದಾರೆ. ದೇಣಿಗೆ ನೀಡಲಿರುವ ಭಕ್ತ ಅನಾಮಧೇಯರಾಗಿ ಉಳಿಯಲು ಬಯಸಿದ್ದಾರೆ ಎಂದು ಹೇಳಿದ ಅವರು, ‘ತಮ್ಮ ಕಂಪನಿಯ ಶೇ 60ರಷ್ಟು ಷೇರುಗಳನ್ನು ಮಾರಿ ಸುಮಾರು ₹6 ಸಾವಿರದಿಂದ ₹7 ಸಾವಿರ ಕೋಟಿ ಗಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದ್ದಾರೆ.