Site icon Ullalavani

ಚೀನಾದಲ್ಲಿ ಬಾತುಕೋಳಿ ಬಿಟ್ಟು ಹಂದಿ ಮಾಂಸ ಬಳಕೆ ಹೆಚ್ಚಳ ‘ಶಟಲ್ ಹಾರಾಟ’ಕ್ಕೆ ಪುಕ್ಕಗಳ ಕೊರತೆ

ನವದೆಹಲಿ : ಚೀನಾ ದೇಶದಲ್ಲಿ ಕುಕ್ಕುಟೋದ್ಯಮ ನೆಲಕಚ್ಚಿದೆ. ಅದರ ಪರಿಣಾಮ ಬ್ಯಾಡ್ಮಿಂಟನ್ ಕ್ರೀಡೆಯ ಮೇಲಾಗುತ್ತಿದೆ.  ಹೌದು; ಚೀನಾದಲ್ಲಿ ಹಂದಿ ಮಾಂಸ ಖಾದ್ಯಗಳ ಸೇವನೆ ಹೆಚ್ಚುತ್ತಿದ್ದು, ಬಾತುಕೋಳಿಗಳ ಖಾದ್ಯಗಳ ಬೇಡಿಕೆ ಕುಸಿದಿದೆ. ಇದರಿಂದಾಗಿ ಬಾತುಕೋಳಿಗಳ ಪುಕ್ಕಗಳ ಲಭ್ಯತೆ ಗಣನೀಯವಾಗಿ ಕುಸಿದಿದ್ದು, ಬ್ಯಾಡ್ಮಿಂಟನ್ ಆಟದಲ್ಲಿ ಬಳಸಲಾಗುವ ಶಟಲ್ ಕಾಕ್‌ಗಳ ತಯಾರಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಫ್ರೆಂಚ್ ಸುದ್ದಿ ಪತ್ರಿಕೆ ‘ಲಾ ಎಕ್ವಿಪ್’ ಈಚೆಗೆ ವರದಿ ಮಾಡಿದೆ.


ಬಾತುಕೋಳಿ ಅಥವಾ ಇನ್ನಿತರ ಪ್ರಾಣಿ, ಪಕ್ಷಿಗಳಿಂದ ಶಟಲ್ ತಯಾರಿಕೆಯ ಕಚ್ಚಾವಸ್ತುಗಳ ಮೇಲೆ ಅವಲಂಬಿತರಾಗುವುದನ್ನು ಬಿಡುವ ಕಾಲ ಇದು. ಅದಕ್ಕಾಗಿ ಈಗ ಪರ್ಯಾಯ ಮಾರ್ಗ ಹುಡುಕಬೇಕು ಎಂದು ಭಾರತದ ಶಟಲ್ ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ‘ಈಗ ಅಥವಾ ಮುಂದಿನ ದಿನಗಳಲ್ಲಿ ಪುಕ್ಕಗಳ ಬಳಕೆಯನ್ನು ಬಿಟ್ಟು ಬೇರೆ ಮಾರ್ಗದತ್ತ ನಾವು ಸಾಗಬೇಕಿದೆ. ನಮ್ಮ ಕ್ರೀಡೆಯು ಅಗಾಧವಾಗಿ ಬೆಳೆದಿದೆ. ಚೀನಾ, ಇಂಡೊನೇಷ್ಯಾ ಮತ್ತು ಭಾರತ ದೇಶಗಳು ಶಟಲ್‌ಗಳ ಬಳಕೆಯಲ್ಲಿ ಸಿಂಹಪಾಲು  ಹೊಂದಿವೆ’ ಎಂದು ಭಾರತದ ರಾಷ್ಟ್ರೀಯ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ.
‘ಶಟಲ್‌ಗಳ ಕೊರತೆಗೆ ಕೇವಲ ಬಾತುಕೋಳಿ ಅಥವಾ ಹೆಬ್ಬಾತುಗಳ ಮಾಂಸದ ಬಳಕೆ ಕುಂಠಿತವಾಗಿರುವುದಷ್ಟೇ ಕಾರಣವಲ್ಲ. ಬ್ಯಾಡ್ಮಿಂಟನ್ ಆಡುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವುದು ಒಂದು ಕಾರಣ. ಇದು ಒಳ್ಳೆಯದೇ. ಆದರೆ ಪ್ರಯೋಗಾಲಯದಲ್ಲಿ ನಿರ್ಮಿತ ಅಥವಾ ಸಿಂಥೆಟಿಕ್ ವಸ್ತು ಬಳಸಿ ಶಟಲ್ ಬಳಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದೂ ಗೋಪಿಚಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಹೈದರಾಬಾದಿನಲ್ಲಿರುವ ಗೋಪಿಚಂದ್ ಅಕಾಡೆಮಿಯಲ್ಲಿರುವ ಶಟಲ್‌ಗಳ ದಾಸ್ತಾನು ಮುಂದಿನ ಎರಡು ವಾರಗಳಿಗೆ ಸಾಕಾಗಲಿದೆ ಎಂದು ವರದಿಯಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಕಾರ್ಯದರ್ಶಿ ಸಂಜಯ್ ಮಿಶ್ರಾ, ‘ರಾಷ್ಟ್ರೀಯ ಶಿಬಿರಗಳಿಗೆ ಶಟಲ್‌ಗಳ ಪೂರೈಕೆಯನ್ನು ಈ ವಾರ ಸಮಪರ್ಕವಾಗಿ ನಿರ್ವಹಿಸಬಹುದು. ಆದರೆ ದೀರ್ಘ ಅವಧಿಯಲ್ಲಿ ಇದು ಸವಾಲಿನದ್ದಾಗಲಿದೆ’ ಎಂದರು.
‘ಯಾನೆಕ್ಸ್ ಸಂಸ್ಥೆಯು ಅ. 20ರ ನಂತರ ದಾಸ್ತಾನು ಕಳಿಸಲಿದೆ. ಶಟಲ್‌ಗಳ ಕೊರತೆಯಿಂದ ತರಬೇತಿ ಶಿಬಿರ ಅಥವಾ ಯಾವುದೇ ಟೂರ್ನಿಗಳ ಮೇಲೆ ಪರಿಣಾಮ ಬೀರಿಲ್ಲ’ ಎಂದು ಅವರು ಹೇಳಿದರು.  ‘ಈ ಸಮಸ್ಯೆಯ ತ್ವರಿತ ಪರಿಹಾರಕ್ಕಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಒಂದೆರಡು ದಿನಗಳಲ್ಲಿ ಹೈದರಾಬಾದಿಗೆ ಶಟಲ್‌ಗಳನ್ನು ಕಳಿಸುತ್ತಿದ್ದೇವೆ’ ಎಂದು ಯಾನೆಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕರಣ್ ಧಾರ್ ತಿಳಿಸಿದ್ದಾರೆ.  ‘ಕಚ್ಚಾ ಸಾಮಗ್ರಿಗಳ ಕೊರತೆಯಿಂದಾಗಿ ಶಟಲ್ ಉತ್ಪಾದನೆ ಕುಂಠಿತವಾಗಿದೆ. ಪುಕ್ಕಗಳ ಸರಬರಾಜು ಸಮರ್ಪಕವಾಗಿಲ್ಲ. ಅದರಿಂದಾಗಿ ಕಡಿಮೆ ಪ್ರಮಾಣದಲ್ಲಿ ತಯಾರಾಗುತ್ತಿರುವ ಉತ್ತಮ ಗುಣಮಟ್ಟದ ಶಟಲ್‌ಗಳು ದುಬಾರಿಯಾಗಿವೆ’ ಎಂದೂ ಅವರು ಹೇಳಿದರು.

Exit mobile version