Site icon Ullalavani

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ರೋಗಿಗಳು ಸಾಯುವ ಸಂದರ್ಭ ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆಯನ್ನು ಖಂಡಿಸಿ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ವತಿಯಿಂದ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಿಂದ ಉಳ್ಳಾಲ ಠಾಣೆಯವರೆಗೆ ಪ್ರತಿಭಟನಾ ಜಾಥಾ ಶನಿವಾರ ನಡೆಯಿತು.

ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಆ.17 ರಂದು ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅತೀ ಹೆಚ್ಚು ಜೀವ ಅಪಾಯವಿರುವ ರೋಗಿಯ ನಿಧನವನ್ನು ಸಂಬಂಧಿಕರಿಗೆ ತಿಳಿಸುವ ಸಂದರ್ಭ ಕೆಲ ದುಷ್ಕರ್ಮಿಗಳು ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ವೈದ್ಯರ , ಅರೆ ವೈದ್ಯಕೀಯ ಸಿಬ್ಬಂದಿ , ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸಗೈದು ಹಾನಿ ಮಾಡಿರುವ ಪ್ರಕರಣ ನಡೆದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಲು ಮುಂದಾಗದೇ ಇರುವುದು ವಿಷಾಧನೀಯ. ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ರೋಗಿ ಸತ್ತರೆ, ಚಿಕಿತ್ಸೆಗೆ ನಿರೀಕ್ಷಿತ ಫಲಿತಾಂಶ ದೊರಕದೇ ಇದ್ದಾಗ ಅಲ್ಲಿ ಸೇರಿದ ಸಂಬಂಧಿಕರು, ಸ್ನೇಹಿತರು ಹಾಗೂ ಇತರರು ಸೇರಿ ಉದ್ವೇಗಕ್ಕೊಳಗಾಗಿ ಹಿಂಸಾಪ್ರವೃತ್ತಿಗೆ ಇಳಿಯುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಇಂತಹ ಮನಸ್ಥಿತಿಯುಳ್ಳವರಿಗೆ ಸಂದೇಶ ಸಾರುವ ಸಲುವಾಗಿ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸರು ಇಂತಹ ಘಟನೆಗಳಲ್ಲಿ ತೊಡಗುವವರನ್ನು ತಕ್ಷಣ ಬಂಧಿಸಬೇಕು. ಮೌಖಿಕವಾಗಿ ಪೊಲೀಸರಿಗೆ ವಿಚಾರ ಮುಟ್ಟಿಸಿದರೂ ಶೀಘ್ರವೇ ಕ್ರಮಕೈಗೊಳ್ಳುವಂತಿರಬೇಕು.ಠಾಣೆಯಲ್ಲೇ ಜಾಮೀನು ನೀಡುವಂತಹ ಕಾಯ್ದೆಯನ್ನು ದಾಖಲಿಸುವುದರಿಂದ ಆರೋಪಿಗಳು ಮತ್ತೆ ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಅದಕ್ಕಾಗಿ ನ್ಯಾಯಾಲಯದ ಸಮಕ್ಷಮ ಜಾಮೀನು ನೀಡುವಂತಹ ಕಾಯ್ದೆಗಳನ್ನು ದಾಖಲಿಸುವಂತಿರಬೇಕು. ಇಂತಹ ವೈದ್ಯರ ಮೇಲಿನ ವಿಶ್ವಾಸ ಬೆಳೆಯದೇ ಹೋದಲ್ಲಿ ರೋಗಿಗಳಿಗೆ ನಿರೀಕ್ಷಿತ ಚಿಕಿತ್ಸೆಯನ್ನು ಕೊಡಿಸಲು ಅಸಾಧ್ಯ. ಅಲ್ಲದೆ ಕೆಲ ವೈದ್ಯರು ಹೆದರಿಕೆಯಿಂದಲೇ ಬೇರೆ ಆಸ್ಪತ್ರೆಗಳಿಗೆ ಸಾಗಿಸಲು ಸೂಚಿಸುವುದರಿಂದ ರೋಗಿಗಳು ದಾರಿಮಧ್ಯೆ ಸಾವನ್ನಪ್ಪುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಈ ಸಂದರ್ಭ ಡಾ.ಮುಕುಂದ್, ಡಾ.ಪೊಲ್ನಾಯ, ಡಾ.ಸತೀಶ್ ಭಟ್, ಡಾ.ಗಣಪತಿ ಭಟ್, ಡಾ.ಮಂಜುನಾಥ್ ರೈ, ಡಾ.ಭರತ್ ಶೆಟ್ಟಿ, ಡಾ. ಪ್ರಕಾಶ್ ಹರಿಶ್ಚಂದ್ರ, ಡಾ.ಉಲ್ಲಾಸ್ ಶೆಟ್ಟಿ, ಡಾ.ಕಿಶೋರ್ ಕುಮಾರ್, ಡಾ.ವಾಸ್ವಾನಿ ಮೊದಲಾದವರು ಉಪಸ್ಥಿತರಿದ್ದರು.

Exit mobile version