Site icon Ullalavani

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಿಂದಾಗಿ ಜನ ಹಳ್ಳಿ ಸಂಸ್ಕೃತಿಯ ಸೊಬಗನ್ನು ಕಡಿಮೆ ಮಾಡಿಕೊಂಡಿದ್ದಾರೆ : ರವೀಂದ್ರ ರೈ ಕಲ್ಲಿಮಾರ್

ಉಳ್ಳಾಲ : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಿಂದಾಗಿ ಜನ ಹಳ್ಳಿ ಸಂಸ್ಕೃತಿಯ ಸೊಬಗನ್ನು ಕಡಿಮೆ ಮಾಡಿಕೊಂಡು ಜೀವನ ನಡೆಸಲಾಗುತ್ತಿದೆ. ಆದರೆ  ತುಳು ಸಂಸ್ಕೃತಿಯಡಿ ಹುಟ್ಟಿ ಬೆಳೆದವರು ಹಿರಿಯರ ಆದರ್ಶ ಮೌಲ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಸದುದ್ದೇಶದಿಂದ ಹಾಗೂ ಮುಂದಿನ ಪೀಳಿಗೆಯಲ್ಲಿ  ಕೃಷಿ ಸಂಸ್ಕೃತಿಯನ್ನು ಜ್ವಲಂತವಾಗಿಡಲು ವಿದ್ಯಾರತ್ನ ಶಾಲೆಯ ಕಾರ್ಯಕ್ರಮ ಪೂರಕವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಹೇಳಿದರು.
ಅವರು ಹರೇಕಳ ಗ್ರಾಮದ ಮಂಜಲಗುತ್ತು ಮನೆಯ ಮುಂಭಾಗದಲ್ಲಿರುವ ಹಡಿಲು ಬಿದ್ದ ಮಡ್ಡೆಲ್ ಮಾರ್ ಗದ್ದೆ ಸೇರಿ ಒಟ್ಟು 16 ಗದ್ದೆಯಲ್ಲಿ  ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಸಾಂಕೇತಿಕ  ನಾಟಿ ಕಾರ್ಯಕ್ರಮ ಮತ್ತು ಕೆಸರುಗದ್ದೆಯಲ್ಲಿ ಆಟೋಟಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತುಳುನಾಡು ಕೃಷಿಗೆ ಪೂರಕವಾದ  ಫಲವತ್ತಾದ ಮಣ್ಣು ಹೊಂದಿದ್ದು, ಹಿಂದೆ ಧರ್ಮಬೇಧ, ವರ್ಗಬೇಧವಿಲ್ಲದೇ ಗದ್ದೆಗಳಲ್ಲಿ ಕೃಷಿ ಮಾಡಿದವರು. ಇದರಿಂದ ಜೀವನೋತ್ಸಾಹದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಸದ್ಯದ ಕಾಲಘಟ್ಟದಲ್ಲಿ  ಕೃಷಿಯಿಂದ ದೂರ ಹೋಗುತ್ತಿದ್ದೇವೆ, ಶಿಕ್ಷಣದ ವ್ಯವಸ್ಥೆಯಿಂದಾಗಿ ಹಳ್ಳಿ ಸಂಸ್ಕೃತಿಯ ಸೊಬಗನ್ನು ಕಡಿಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ತುಳು ಸಂಸ್ಕೃತಿಯಡಿ ಹುಟ್ಟಿ ಬೆಳೆದ ಹಿರಿಯರ ಆದರ್ಶ ಮೌಲ್ಯಗಳನ್ನು ಮುಂದಿನ ಪೀಳಿಗೆಯಲ್ಲಿ ಮುಂದುವರೆಸಿಕೊಂಡು ಹೋಗುವ ಸದುದ್ದೇಶದಿಂದ ಶಾಲೆಯ ಕಾರ್ಯಕ್ರಮ ಮುನ್ನುಡಿ ಬರೆಯಲಿ. ಕೃಷಿ ಅನ್ನುವುದು ಜೀವನಾಡಿ ಅದನ್ನು ಮರೆಯಬಾರದು, ಆಲಸ್ಯ ಮಾಡದೇ ಭತ್ತ ಬೆಳೆಸುವುದು, ಫಸಲು ಬರಿಸುವ ಅಧ್ಯಯನ ಮಾಡಿ, ಕಾಯಕದಲ್ಲಿ ಭಾಗಿಯಾಗಿರಿ. ಇದರ ಹಿಂದೆ ಸುಖ, ಸಂತೋಷ, ನೆಮ್ಮದಿಯಿದೆ ಎಂದರು.


ದಿ ಮೈಸೂರ್ ಇಲೆಕ್ಟ್ರಿ ಕಲ್ಸ್ ಪ್ರೈ.ಲಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಕೃಷಿ ಕಾಯಕದೊಂದಿಗೆ  ಗದ್ದೆಯ ಮಣ್ಣಿನಲ್ಲಿ  ಮಕ್ಕಳ ಪ್ರತಿಭೆ ತೋರಿಸುವ ವೇದಿಕೆ ಇದಾಗಿದೆ.  ಕೃಷಿ ಚಟುವಟಿಕೆಗಳನ್ನು ಅರಿತುಕೊಂಡು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಸಮಾಜಕ್ಕೆ ಮಾದರಿಯಾಗಿ ಬಾಳುವಂತಹ ಸಂದೇಶ ಕಾರ್ಯಕ್ರಮ ನೀಡಿದೆ ಎಂದರು.
ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ,  ಗದ್ದೆ ಮಣ್ಣಿನಲ್ಲಿ ಆಡಿದರೆ ರೋಗಗಳೇ ಇಲ್ಲ, ಪ್ರತಿಯೊಂದು ಗದ್ದೆಯಲ್ಲಿ ಕೃಷಿಯಿತ್ತು. ಶಾಲೆಗೆ ಹೋಗುವ ಸಂದರ್ಭದಲ್ಲಿಯಾದರೂ ಗದ್ದೆಗಳನ್ನು ದಾಟುವ ಮೂಲಕ ಮೈಗೆ ಗದ್ದೆ ಮಣ್ಣು ತಗಲುತಿತ್ತು.  ಪ್ರಸ್ತುತ ಕೃಷಿಯೇ ಇಲ್ಲ, ಲಾಭಾಂಶವಿಲ್ಲದೇ ಕೃಷಿಯತ್ತ ಜನರು ಹೋಗುತ್ತಿಲ್ಲ. ಆದರೆ ನೆಮ್ಮದಿಯ ಬಾಳ್ವೆಗೆ ಕೃಷಿಯೇ ಪೂರಕ ಎಂದರು.

ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೆಬ್ಬೇಲಿಗುತ್ತು ಮೋಹನ್ ದಾಸ್ ರೈ  ಕಾರ್ಯಕ್ರಮ ಉದ್ಘಾಟಿಸಿದರು. ಹಿಂದುಳಿದ ಆಯೋಗದ ಮಾಜಿ ಸದಸ್ಯ ಕೆ.ಟಿ.ಸುವರ್ಣ, ರೈಲ್ವೇ ಸಲಹಾ ಮಂಡಳಿಯ ಮಾಜಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ,  ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ನಾರ್ಯಗುತ್ತು,  ಸುಧಾಕರ್ ಗಟ್ಟಿ ಬೈತಾರ್ , ಮಂಡಲ ಬಿಜೆಪಿ ಯುವಮೋರ್ಛಾ ಅಧ್ಯಕ್ಷ ಮುರಳೀಧರ್ ಕೊಣಾಜೆ, ಬಿಜೆಪಿ ಮುನ್ನೂರು ಮಹಾಶಕ್ತಿಕೇಂದ್ರ ಅಧ್ಯಕ್ಷ ಸತೀಶ್ ಪೂಜಾರಿ,  ಪ್ರವೀಣ್ ಕೊಂಡಾಣ ಮಿತ್ರನಗರ, ಗದ್ದೆ ಮಾಲೀಕರಾದ ರತ್ನ ತಿಮ್ಮಪ್ಪ ಮಡಿವಾಳ ಹಾಗೂ ಬಾಬು ಬಂಗೇರ, ಸ್ಥಳೀಯ ಮುಖಂಡರುಗಳಾದ ಸುಧಾಕರ ಆಚಾರ್ಯ ರಾಜಗುಡ್ಡೆ ,ಕಲ್ಲಾಯಿ ದುರ್ಗಾಪ್ರಸಾದ್ ರೈ, ಪಡ್ಡಾಯಿಬೆಟ್ಟು ಜಯರಾಮ್, ಭಾಸ್ಕರ್ ರೈ ಸಂಪಿಗೆದಡಿ,  ಬಂಟರ ಸಂಘದ ಪ್ರ.ಕಾ ಆನಂದ್ ಶೆಟ್ಟಿ ತೊಕ್ಕೊಟ್ಟು, ಗೋಪಾಲಕೃಷ್ಣ ಮೇಲಾಂಟ ಬೊಳ್ಯಗುತ್ತು,  ದೆಬ್ಬೇಲಿ ಬಬಿತಾ ಮಹಾಬಲ ಹೆಗ್ಡೆ, ವರದರಾಜ್ ಮಾಣೈ, ರಾಧಾಕೃಷ್ಣ ರೈ ಮುಖ್ಯ ಅತಿಥಿಗಳಾಗಿದ್ದರು.
ಶಾಲಾ ವಿದ್ಯಾರ್ಥಿ ನಾಯಕ  ಭವಿತ್ ವಿ ಸುವರ್ಣ,  ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ ಹಮೀದ್  ಉಪಸ್ಥಿತರಿದ್ದರು.
ಭಗವಾನ್ ದಾಸ್ ತೊಕ್ಕೊಟ್ಟು ನಿರೂಪಿಸಿದರು.  ಶಾಲಾ ಸಂಸ್ಥಾಪಕ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಕಾರ‍್ಯದರ್ಶಿ ಸೌಮ್ಯ ಆರ್ ಶೆಟ್ಟಿ  ವಂದಿಸಿದರು

`ಕೃಷಿಕರ ಕಷ್ಟಗಳ ಅರಿವು ಮೂಡಿಸುವ ಕಾರ್ಯ’
ಹೆತ್ತವರು ಕೃಷಿಯಲ್ಲಿ ಕೆಲಸಗಳನ್ನು ನಡೆಸಿರುವ ಹಿನ್ನೆಲೆಯಿಂದ ನಾವು ಬಲಿಷ್ಠರಾಗಿ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಾಗಿಯಾಗಲು ಸಾಧ್ಯವಾಗಿದೆ. ನಾಟಿ ಕಾರ್ಯದಿಂದ ಹಿಡಿದು ಭತ್ತ ಬೇಯಿಸುವವರೆಗೂ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆವು, ಅಂದಿನ ಹಾಗೂ ಈವರೆಗೆ ಕೃಷಿಕರ ಕಷ್ಟಕರ ಜೀವನ ಗೊತ್ತಾಗಬೇಕು ಅನ್ನುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳಿಗೆ ಪ್ರತೀ ವರ್ಷವೂ ಕಳೆದ 7 ವರ್ಷಗಳಿಂದ ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ 25 ನೇ ವರ್ಷದ ಸಂವತ್ಸರವನ್ನು ಪೂರೈಸಿ  ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಪ್ರತೀ ವರ್ಷ ಕೃಷಿಕರ ಜೀವನ, ಬದುಕು ನಡೆಸುತ್ತಿರುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿಯೂ ಮಂಜದಗುತ್ತು ಮುದಲೆಮಾರು ಬರಿಕೆಯ ಹಡಿಲುಬಿದ್ದ  16 ಗದ್ದೆಗಳಲ್ಲಿ ನಾಟಿ ಕಾರ್ಯಗಳನ್ನು ನಡೆಸಲಾಗುತ್ತಿದೆ.

ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು
ಶಾಲಾ ಸಂಸ್ಥಾಪಕರು.

Exit mobile version