
ಉಳ್ಳಾಲ ನಗರಸಭೆ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 19ರಂದು ಬೆಳಗ್ಗೆ 11 ಗಂಟೆಗೆ ಲೋಕಾಯುಕ್ತ ಜನಸಂಪರ್ಕ ಸಭೆ ನಡೆಯಲಿದೆ.
ಅಂದು ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಉಪ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಪರಿಶೀಲಕರು ಉಪಸ್ಥಿತರಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿ ನಮೂನೆಗಳನ್ನು ಹಂಚಿಕೆ ಮಾಡಲಿದ್ದಾರೆ. ಜೊತೆಗೆ ಅರ್ಜಿ ಭರ್ತಿ ಮಾಡಲು ಸಹಾಯ ಮಾಡಿ, ಪ್ರಮಾಣ ಪತ್ರಗಳನ್ನು ಸ್ವೀಕರಿಸಲಿದ್ದಾರೆ.
ಸರಕಾರಿ ಕಚೇರಿಗಳಲ್ಲಿ ಕೆಲಸ ತಡಮಾಡುವ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ವಿರುದ್ಧ ನಾಗರಿಕರು ದೂರು ಸಲ್ಲಿಸಬಹುದು. ಇಂತಹ ದೂರುಗಳನ್ನು ಸಾಮಾನ್ಯ ಕಾರ್ಯದಿನಗಳಲ್ಲಿಯೂ ಕಚೇರಿ ಸಮಯದಲ್ಲಿ ಸಲ್ಲಿಸಬಹುದಾಗಿದೆ. ಜೊತೆಗೆ ದೂರವಾಣಿ ಮೂಲಕವೂ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ನಮೂನೆ-1 ಮತ್ತು ನಮೂನೆ-2 ಬಳಸಬೇಕು ಹಾಗೂ ಪ್ರಮಾಣ ಪತ್ರವನ್ನು ಜೋಡಿಸಬೇಕು. ಭರ್ತಿಮಾಡಿದ ಅರ್ಜಿಗಳನ್ನು ಉಳ್ಳಾಲ ಸಭೆಯಲ್ಲಿ, ಲೋಕಾಯುಕ್ತ ಸ್ಥಳೀಯ ಕಚೇರಿಯಲ್ಲಿ ಅಥವಾ ನೇರವಾಗಿ ನೋಂದಣಿ ಅಧಿಕಾರಿಗೆ – ಕರ್ನಾಟಕ ಲೋಕಾಯುಕ್ತ, ಬಹುಮಹಡಿ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ, ಬೆಂಗಳೂರು – 560001 ಈ ವಿಳಾಸಕ್ಕೆ ಕಳುಹಿಸಬಹುದು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಸಾರ್ವಜನಿಕರು ಈ ಅವಕಾಶವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ತಮ್ಮ ಅಹವಾಲುಗಳನ್ನು ಪರಿಹರಿಸಿಕೊಳ್ಳುವಂತೆ ಕೋರಿದ್ದಾರೆ.