
ಉಳ್ಳಾಲ: ಸ್ಕೂಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕೋಟೆಪುರ ನಿವಾಸಿ ಉದ್ಯಮಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು-ಉಳ್ಳಾಲ ರಸ್ತೆಯ ಸುಂದರಿಬಾಗ್ ಎಂಬಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ.
ಉಳ್ಳಾಲ ಕೋಟೆಪುರ ನಿವಾಸಿ,ಪ್ರಸ್ತುತ ಮುಕ್ಕಚ್ಚೇರಿಯಲ್ಲಿ ನೆಲೆಸಿರುವ ಇಬ್ರಾಹಿಂ (47)ಯಾನೆ ಕಮಾಲ್ ಮೃತರು. ಮಂಗಳೂರು ಧಕ್ಕೆಯಲ್ಲಿ ಮೀನು ವ್ಯವಹಾರ ನಡೆಸುತ್ತಿದ್ದ ಅವರು ಸಂಜೆ ವೇಳೆ ತೊಕ್ಕೊಟ್ಟು ಕಡೆಯಿಂದ ಮನೆ ಕಡೆಗೆ ಪುತ್ರನನ್ನು ಕುಳ್ಳಿರಿಸಿ ಸ್ಕೂಟರಿನಲ್ಲಿ ತೆರಳುವ ಸಂದರ್ಭ, ಆಯತಪ್ಪಿ ಸ್ಕೂಟರ್ ವಿದ್ಯುತ್ ಕಂಭಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇಬ್ರಾಹಿಂ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಮೃತರು ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದವರಾಗಿದ್ದು, ಇದರಿಂದಾಗಿ ಘಟನೆ ಬೆಳಕಿಗೆ ಬರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ತೊಕ್ಕೊಟ್ಟುವಿನ ಸಹಾರಾ ಆಸ್ಪತ್ರೆ ಎದುರುಗಡೆ ಜನ ಜಮಾಯಿಸಿದ್ದರು.