Site icon Ullalavani

ಕೋಟೆಕಾರು : ಹಲಸು ಮೇಳ ಉದ್ಘಾಟನೆ, ತೋಟಗಾರಿಕೆ ಬೆಳೆ ಮಾಹಿತಿ ಕಾರ್ಯಗಾರ

ಕೋಟೆಕಾರು: ಹಲಸು ಹಣ್ಣು ಮಾತ್ರವಲ್ಲ, ಅದು ಬಾಂಧವ್ಯ ಬೆಸೆಯುವ ಕೊಂಡಿಯಂತೆ ಮನಸ್ಸು ಒಂದು ಗೂಡಿಸುವ ಕಾರ್ಯ ಮಾಡುತ್ತಿದೆ ಎಂದು ಪತ್ರಕರ್ತ ವಾಲ್ಟರ್ ನಂದಳಿಕೆ ಹೇಳಿದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ‌ದ ವತಿಯಿಂದ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕೋಟೆಕಾರು ಬೀರಿ‌ ಜಂಕ್ಷನ್‌ ನಲ್ಲಿರುವ ಕೆ. ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧದಲ್ಲಿ‌‌ ಮೂರು ದಿನಗಳ ಕಾಲ ನಡೆಯಲಿರುವ ಹಲಸು ಮೇಳ, ಗ್ರಾಮ ಸಂಪರ್ಕ ಅಭಿಯಾನ, ಹಡಿಲು ಭೂಮಿ ಕೃಷಿಗೆ ಚಾಲನೆ, ಮಹಿಳಾ‌ ಸ್ವಾವಲಂಬಿ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಪ್ರಕೃತಿಯನ್ನು ರಕ್ಷಿಸಬೇಕು. ನಮ್ಮ ಆಹಾರ ಪದಾರ್ಥಗಳ ಸೇವನೆ ಮೇಲೆ ಒಂದು ಶಿಸ್ತು ಇರಬೇಕು. ಯಾಕೆಂದರೆ ಪ್ರಕೃತಿ ಯಾವತ್ತೂ ನಮಗೆ ಒಳ್ಳೆಯದನ್ನೇ ಬಯಸುತ್ತದೆ. ಹಸುಗಳಿಗೆ ಹಲಸಿದ ತಂಗಳನ್ನ ಕೊಟ್ಟರೂ ಆ ಗೋ ಮಾತೆ ನಮಗೆ ದೇವರಿಗೆ ನೈವೇದ್ಯ ಮಾಡುವ ಹಾಲನ್ನು ಕೊಡುತ್ತದೆ. ಕೃತಜ್ಞತೆ ಭಾವನೆ ನಮ್ಮಲ್ಲಿರಬೇಕು ಎಂದರು. ಕೋಟೆಕಾರು ‌ವ್ಯವಸಾಯ ಸೇವಾ ಸಹಕಾರಿ ‌ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರವೀಣ್ ಕೆ ತೋಟಗಾರಿಕೆ ಬೆಳೆ ಕೃಷಿ ಮಾಹಿತಿ ನೀಡಿದರು. ಕೋಟೆಕಾರು ಬ್ಯಾಂಕ್ ಉಪಾಧ್ಯಕ್ಷ ಕೆ. ಬಿ. ಅಬೂಸಾಲಿ, ನಿರ್ದೇಶಕ ಕೃಷ್ಣಪ್ಪ ಸಾಲ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್, ಕೋಟೆಕಾರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ವಿಪಕ್ಷ ನಾಯಕ ಅಹ್ಮದ್ ಬಾವ ಅಜ್ಜಿನಡ್ಕ ಹಾಗೂ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್. ಕೊಣಾಜೆ ಉಪಸ್ಥಿತರಿದ್ದರು. ಜೇನು ಕೃಷಿಕ ಭರತ್ ರಾಜ್ ಸೊರಕೆ ಸ್ವಾಗತಿಸಿದರು. ಸುಮಲತಾ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ಮೇಳದ ವಿಶೇಷ: ಮೂರು ದಿನಗಳ ಕಾರ್ಯಕ್ರಮದಲ್ಲಿ ಕೃಷಿ ಉಪಕರಣಗಳ ಪ್ರದರ್ಶನ, ಮಾಹಿತಿ, ಮಾರಾಟ, ಕೃಷಿ ಮಳಿಗೆಗಳಲ್ಲಿ ಕೆಂಪು ಹಲಸು, ಚಂದ್ರಹಲಸು, ಹಲಸಿನ ಹೋಳಿಗೆ, ಜಿಲೇಬಿ, ಹಪ್ಪಳ, ಚಿಪ್ಸ್, ಹಲಸು ಮಂಚೂರಿ, ಹಲಸಿನ‌ ಗಟ್ಟಿ, ದೋಸೆ, ಹಲಸಿನ ಐಸ್ ಕ್ರೀಂ, ಆಟಿ ವಿಶೇಷ ಪತ್ರೋಡೆ, ಕಣಿಲೆ ಖಾದ್ಯ, ಕೆಸುವಿನ ಖಾದ್ಯ, ತಜಂಕ್ ಪತ್ರೋಡೆ, ಸಾವಯವ ಸಿರಿಧಾನ್ಯ ಉತ್ಪನ್ನಗಳು, ಖಾದಿ‌ ಉತ್ಪನ್ನಗಳು, ಹ್ಯಾಂಡ್ ಮೇಡ್ ವಸ್ತುಗಳು, ತರಕಾರಿ ಮತ್ತು ಹಣ್ಣಿನ ಗಿಡಗಳ ಮಾರಾಟ, ನೈಸರ್ಗಿಕ ಹಣ್ಣಿನ ರಸ, ಪರಿಶುದ್ಧ ಜೇನು, ಕಲ್ಪರಸ.. ಇನ್ನೂ ಹಲವಾರು ನೈಸರ್ಗಿಕ ಉತ್ಪನ್ನಗಳ ಪ್ರದರ್ಶನ, ಸಮಗ್ರ ಮಾಹಿತಿ ನೀಡುತ್ತಿರುವುದು ಆಸಕ್ತರ ಗಮನ ಸೆಳೆಯಿತು. ಜೊತೆಗೆ ತೋಟಗಾರಿಕೆ ಬೆಳೆ ಮತ್ತು ಸರಕಾರಿ ಯೋಜನೆಗಳ ಮಾಹಿತಿ ನೀಡಲಾಯಿತು.

 ಭಾರತ ತಾಳೆಬೆಳೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಯಾಕೆಂದರೆ ದೊಡ್ಡ ಪ್ರಮಾಣದಲ್ಲಿ ಭಾರತ ಆಮದು ದೇಶವಾಗಿದ್ದು ಹೆಚ್ಚಿನ ಮೊತ್ತ ವ್ಯಯಿಸುತ್ತಿದೆ. ದಕ್ಷಿಣ ಕನ್ನಡದವರು ಪುಣ್ಯವಂತರು ಯಾಕೆಂದರೆ ಇಲ್ಲಿ ಆರು ತಿಂಗಳು ಮಳೆ ಬರುತ್ತಿದೆ. ಹಾಗಾಗಿ ಸುರಿದು ಹರಿದು ವ್ಯರ್ಥವಾಗಿ ಹೋಗುವ ಮಳೆ ನೀರನ್ನು ಒಂದು ಕೆರೆ ತೋಡುವ ಮೂಲಕ ನೀರನ್ನು ಸಂರಕ್ಷಣೆ ಮಾಡಿಕೊಂಡು ನಾವು ಕೃಷಿ ಚಟುವಟಿಕೆ ನಡೆಸಬಹುದು. ಸಣ್ಣದಾಗಲೀ ಅಥವಾ ದೊಡ್ಡ ಕೆರೆ ಮಾಡಬಹುದಾದರೆ ವಿವಿಧ ಇಲಾಖೆಯಿಂದ ಧನ ಸಹಾಯ ಧನ ಸಿಗುತ್ತದೆ. ಪ್ರವೀಣ್ ಕೆ. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ
ಆ. 2ರಂದು ಲಾಭದಾಯಕ ಕೃಷಿ ಮಾಹಿತಿ, ಜೇನು ಕೃಷಿ ಮಾಹಿತಿ, ಆ. 3ರಂದು ಹಲಸು‌ಮೌಲ್ಯವರ್ಧನೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ.

Exit mobile version