Site icon Ullalavani

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 15ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

ಮಂಗಳೂರು : ಉತ್ತಮ ಶಿಕ್ಷಣ, ಉದ್ಯೋಗ ಹೊಂದಿರುವ ಮಾನವ ಸಂಪನ್ಮೂಲ ದೇಶದ ಸಂಪತ್ತು. ಶಿಕ್ಷಣ ವ್ಯಕ್ತಿಯ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸರಕಾರ ಎಲ್ಲರ ಸಹಕಾರದೊಂದಿಗೆ ಎಲ್ಲರಿಗೂ ಉತ್ತಮ ಉದ್ಯೋಗ ನೀಡುವ ಗುರಿ ಹೊಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಅವರು ಶುಕ್ರವಾರ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ 15 ನೇ ಆವೃತ್ತಿಯ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿಗೆ ಚಾಲನೆ ನೀಡಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಎಲ್‌.ಧರ್ಮ ಮಾತನಾಡುತ್ತಾ ಕಂಪೆನಿಗಳು ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯ ವನ್ನು ಗುರುತಿಸಿ ಅವರಿಗೆ ಉದ್ಯೋಗ ನೀಡುವಂತಾಗಬೇಕು ಅಂತಹ ಸಾಮರ್ಥ್ಯ ವಿದ್ಯಾರ್ಥಿಗಳು ಹೊಂದುವಂತಾಗಬೇಕು ಎಂದರು.

ಶಾಸಕರಾದ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಉದ್ಯೋಗ ಮೇಳ ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ವಹಿಸುತ್ತದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ, ಮಾಜಿ ಸಚಿವ ರಮಾನಾಥ ರೈ ಅಭಯ ಚಂದ್ರ ಜೈನ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಉದ್ಯಮಿ ಶ್ರೀಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್.ಶೇಕ್ ಕರ್ನಿರೆ, ಬಿಗ್ ಬಾಸ್ ಪ್ರೈಲಿ ಸಂಸ್ಥೆಯ ಸಿಇಒ ರವೀಶ್ ಕಾಮತ್, ರೋಹನ್ ಕಾರ್ಪೋರೇಶನ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ರೋಹನ್ ಮೊಂತೆರೋ, ನಿವೀಯಸ್‌ ಸೊಲ್ಯುಷನ್ ಪ್ರೈಲಿಮಿಟೆಡ್ ಸಿಇಒ ಸುಯೋಗ್ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸ್ವಾಗತಿಸಿದರು. ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version