Site icon Ullalavani

ಕಾಸ್ಕ್ ಸೆಂಟಿನರಿ ಟ್ರಸ್ಟ್ ಆಶ್ರಯದಲ್ಲಿ 307 ಅರ್ಹ ವಿದ್ಯಾರ್ಥಿಗಳಿಗೆ ರೂ. 30 ಲಕ್ಷ ಅಧಿಕ ಮೊತ್ತದ ಸ್ಕಾಲರ್ ಶಿಪ್ ವಿತರಣೆ

ಮಂಗಳೂರು: ಸೇಂಟ್ ಅಗ್ನೆಸ್ ಕಾಲೇಜಿನ ಸೆಂಟಿನರಿ ಬ್ಲಾಕ್’ನಲ್ಲಿ, ಇತ್ತೀಚೆಗೆ ಸಿಎಎಸ್‌ಕೆ ಸೆಂಟಿನರಿ ಟ್ರಸ್ಟ್ ವತಿಯಿಂದ 307 ಅರ್ಹ ವಿದ್ಯಾರ್ಥಿಗಳಿಗೆ ರೂ. 30 ಲಕ್ಷ ಮೊತ್ತದ ಸ್ಕಾಲರ್ ಶಿಪ್ ವಿತರಿಸಲಾಯಿತು.
ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಿ ಸ್ಕಾಲರ್ ಶಿಪ್ ವಿತರಿಸಿದರು. ಎನ್‌ಆರ್‌ಐ ದಾನಿಯಾದ ಮೈಕಲ್ ಡಿಸೋಜಾ ಮತ್ತು ಸೇಂಟ್ ಅಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ವೆನಿಸ್ಸಾ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಸಿಎಎಸ್‌ಕೆ ಸೆಂಟಿನರಿ ಟ್ರಸ್ಟಿನ ದಾನಿಗಳು ಭಾಗವಹಿಸಿದ್ದರು.


2014ರಿಂದಲೂ, ಕಾಸ್ಕ್ ಸೆಂಟಿನರಿ ಟ್ರಸ್ಟ್ ಸಹಾನುಭೂತಿಯೊಂದಿಗೆ ಎಲ್ಲರಿಗೂ ಸಹಾಯ ಮಾಡುತ್ತಿದೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ, ನೆಲೆ, ಸಲಹೆ ಮತ್ತು ಪರಿಸರ ಸಂರಕ್ಷಣೆಯ ಮೂಲಕ ಸಂಕಷ್ಟದಲ್ಲಿರುವ ಮತ್ತು ಸಮಾಜದ ಅಂಚಿನಲ್ಲಿರುವವರಿಗೆ, ಈ ಟ್ರಸ್ಟ್ ಭರವಸೆಯ ದೀಪ ಮತ್ತು ಸಕಾರಾತ್ಮಕ ಬದಲಾವಣೆಯ ಪ್ರೇರಕವಾಗಿ, ಸಮುದಾಯಗಳನ್ನು ಬಲಪಡಿಸಲು ಮತ್ತು ಜನರ ಜೀವನವನ್ನು ಉನ್ನತಗೊಳಿಸಲು ಬಯಸುತ್ತಾ ಕಾರ‍್ಯಾಚರಿಸುತ್ತಿದೆ.
ಧರ್ಮ, ಭಾಷೆ, ಅಂಕಗಳು ಅಥವಾ ಯೋಗ್ಯತೆಯನ್ನು ಪರಿಗಣಿಸದೆ, ಅರ್ಜಿದಾರರ ಆರ್ಥಿಕ ಸ್ಥಿತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸ್ಕಾಲರ್ ಶಿಪ್ ವಿತರಿಸುತ್ತಿದೆ. ಸ್ಕಾಲರ್‌ಶಿಪ್ ಪಡೆದವರಲ್ಲಿ ದಿನಗೂಲಿಗಳು, ರಿಕ್ಷಾ ಚಾಲಕರು ಮತ್ತು ಬೀದಿ ಅಂಗಡಿಗಾರರ ಮಕ್ಕಳು ಸೇರಿದ್ದಾರೆ. ಅನೇಕ ಮಕ್ಕಳು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದರೆ, ಅನೇಕ ಪೋಷಕರು ನಿರುದ್ಯೋಗಿಗಳೂ ಆಗಿದ್ದಾರೆ.
307 ವಿದ್ಯಾರ್ಥಿಗಳಲ್ಲಿ 162 ಹುಡುಗಿಯರು ಹಾಗೂ ಸುಮಾರು 40% ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಈ ವಿದ್ಯಾರ್ಥಿಗಳು 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಸೇರಿದವರಾಗಿದ್ದು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆಗೆ ನರ್ಸಿಂಗ್, ಇಂಜಿನಿಯರಿಂಗ್ ಮತ್ತು ಪ್ಯಾರಾ-ಮೆಡಿಕಲ್ ಕೋರ್ಸ್ ಗಳ ವಿದ್ಯಾರ್ಥಿಗಳೂ ಸೇರಿದ್ದಾರೆ.

Exit mobile version