ಹೊಸದಿಲ್ಲಿ: ಮಂಗಳೂರಿನ ಹಳೆ ಬಂದರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರತ್ಯೇಕ ಲಕ್ಷದ್ವೀಪ ಜೆಟ್ಟಿ ನಿರ್ಮಾಣ ಯೋಜನೆ ಮಂಜೂರಾತಿ ಪಡೆದು ಮೂರು ವರ್ಷ ಕಳೆದಿದೆ. ಇನ್ನು ಕೂಡ ಪರಿಸರ ಇಲಾಖೆ ಸಹಿತ ರಾಜ್ಯ ಸರಕಾರದ ಅಗತ್ಯ ಅನುಮತಿ ಬಾಕಿಯಿದೆ. ಈ ವಿಳಂಬ ನೀತಿಯಿಂದ ಮಹತ್ವದ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.ಶುಕ್ರವಾರ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಬಂದರು ಸಚಿವ ಸರ್ಬಾನಂದ ಸೋನೋವಾಲ್‌ರ ಗಮನಸೆಳೆದಿದ್ದಾರೆ. ಸಂಸತ್ತಿನಲ್ಲಿ ನಿಯಮ 377ರಡಿ ವಿಷಯ ಪ್ರಸ್ತಾಪಿಸಿರುವ ಬ್ರಿಜೇಶ್ ಚೌಟ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಗರಮಾಲಾ-1 ಯೋಜನೆಯಡಿ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಣೆ ಹಾಗೂ ವ್ಯಾಪಾರ-ವಹಿವಾಟು ವೃದ್ಧಿಸುವ ಉದ್ದೇಶದಿಂದ ಮಂಗಳೂರಿನ ಹಳೆ ಬಂದರಿ ನಲ್ಲಿ ಪ್ರತ್ಯೇಕ ಲಕ್ಷದ್ವೀಪ ಜೆಟ್ಟಿ ನಿರ್ಮಾಣ ಯೋಜನೆಯನ್ನು 2022 ಘೋಷಣೆ ಮಾಡಲಾಗಿತ್ತು. 2023ರಲ್ಲಿ ಟೆಂಡರ್ ಪ್ರಕ್ರಿಯೆ ಕೂಡ ನಡೆದಿತ್ತು. ಆ ಬಳಿಕ ಈ ಯೋಜನೆ ಅನುಷ್ಠಾನಕ್ಕೆ ಬರುವಲ್ಲಿ ಯಾವುದೇ ಆಡಳಿತಾತ್ಮಕ ಕ್ರಮಗಳಾಗಿಲ್ಲ ಎಂದು ಹೇಳಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ಆಡಳಿತಾತ್ಮಕ ವಿಳಂಬದ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಕಳೆದ ಚಳಿಗಾಲದ ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಕಳೆದ ಫೆಬ್ರವರಿಯಲ್ಲಿ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರದಿಂದ ಅನುಮತಿ ಪಡೆಯಲಾಯಿತು. ಟೆಂಡರ್ ಆಗಿ ಎರಡು ವರ್ಷಗಳ ಬಳಿಕ ಅನುಮತಿ ಸಿಕ್ಕಿರುವುದು, ಈ ಯೋಜನೆಯ ವಿಳಂಬವನ್ನು ಎತ್ತಿತೋರಿಸು ತ್ತದೆ. ಕಳೆದ ತಿಂಗಳು ರಾಜ್ಯದ ತಜ್ಞರ ಮೌಲ್ಯಮಾಪನ ಸಮಿತಿಯಿಂದ ಅನುಮೋದನೆ ಸಿಕ್ಕಿದೆ. ಆದರೆ ಪರಿಸರ ಇಲಾಖೆ ಸಹಿತ ರಾಜ್ಯ ಸರಕಾರದ ಕಡೆಯಿಂದ ಅಗತ್ಯ ಅನುಮತಿ ಬಾಕಿಯಿರುವ ಕಾರಣ ಈ ಯೋಜನೆ ಅನುಷ್ಠಾನ ಪ್ರಕ್ರಿಯೆ ಮತ್ತಷ್ಟು ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರು ಹಳೆ ಬಂದರಿನಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಕೂಡ ಸಕಾಲಕ್ಕೆ ನಡೆಯದ ಕಾರಣ ಜೆಟ್ಟಿ ಕಾರ್ಯ ಚಟುವಟಿಕೆಗಳಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಈ ಡ್ರೆಜ್ಜಿಂಗ್ ಕಾಮಗಾರಿಯ ಗುತ್ತಿಗೆಯನ್ನು ಬಂದರು ಇಲಾಖೆಯು ಏಳು ವರ್ಷಗಳಿಗೆ ಏಜೆನ್ಸಿಯೊಂದಕ್ಕೆ ವಹಿಸಿದೆ. ಆದರೆ ಈ ಏಜೆನ್ಸಿಯು ಸಮರ್ಪಕವಾಗಿ ಡ್ರೆಜ್ಜಿಂಗ್ ಮೂಲಕ ಜೆಟ್ಟಿಗಳ ಹೂಳೆತ್ತದ ಕಾರಣ ಪ್ರತಿ ಮುಂಗಾರು ಬಂದಾಗಲೂ ಇದೊಂದು ಪುನರಾವರ್ತಿತ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಲು ಹಳೆ ಬಂದರಿನ ಡ್ರೆಜ್ಜಿಂಗ್ ಕಾರ್ಯಕ್ಕೆ ಹೊಸ ಗುತ್ತಿಗೆ ನೀಡುವಂತೆ ಬಂದರು ಇಲಾಖೆ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುತ್ತಿದೆ. ಆದರೆ ಇಲ್ಲಿವರೆಗೆ ಯಾವುದೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.