Site icon Ullalavani

ಅನಾರೋಗ್ಯ ಪೀಡಿತರ ಸಹಾಯಕ್ಕೆ ಪ್ರತಿ ಗ್ರಾಮದಲ್ಲೂ ಮಾಹಿತಿ ಕೇಂದ್ರ: ಸಚಿವ ಯು.ಟಿ.ಖಾದರ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಅನಾರೋಗ್ಯದ ವೇಳೆ ರೋಗಿಯು ಯಾವ ರೀತಿಯ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಮಾರ್ಗದರ್ಶನ ನೀಡಲು ಪ್ರತಿ ಗ್ರಾಮ ಪಂಚಾಯತ್‍ಗಳಲ್ಲೂ ಮಾಹಿತಿ ಕೇಂದ್ರಗಳನ್ನು ನಿರ್ಮಿಸಲು ಸೂಚಿಸಿರುವುದಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು.

ಕಿನ್ಯಾ ಸಿ ಹೆಚ್ ನಗರದ ಕುತುಬಿಯ್ಯಾ ಮದ್ರಸ ಸಭಾಂಗಣದಲ್ಲಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ , ಕುತುಬಿಯ್ಯಾ ಹಳೆ ವಿದ್ಯಾರ್ಥಿ ಕಮಿಟಿ ಕಿನ್ಯ ,ಮತ್ತು ಕುತುಬಿಯ್ಯಾ ಮದ್ರಸದ ಸುವರ್ಣ ಮಹೋತ್ಸವ ಅಂಗವಾಗಿ ಏರ್ಪಡಿಸಿದ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದರು .
ಪ್ರತಿ ಗ್ರಾಮದಲ್ಲೂ ಅನಾರೋಗ್ಯ ಪೀಡಿತರು ತಕ್ಷಣಕ್ಕೆ ಯಾವ ಆಸ್ಪತ್ರೆಗೆ ಹೋಗಿ ಯಾವ ರೀತಿಯ ಚಿಕಿತ್ಸೆ ಪಡೆಯಬೇಕೆಂಬ ಗೊಂದಲವನ್ನು ಹೋಗಲಾಡಿಸುವ ದೃಷ್ಟಿಯಲ್ಲಿ ಅನಾರೋಗ್ಯ ಪೀಡಿತರಿಗೆ ತಕ್ಷಣಕ್ಕೆ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಲು ಗ್ರಾಮ ಪಂಚಾಯತ್‍ನಲ್ಲೇ ಮಾಹಿತಿ ಕೇಂದ್ರಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಕಾಳಜಿ ಇಟ್ಟುಕೊಂಡು ಖಾಸಗಿ ಆಸ್ಪತ್ರೆಗಳು ನೀಡುತ್ತಿರುವ ಸೇವೆ ಶ್ಲಾಘನೀಯ. ಸರಕಾರವೂ ಈಗಾಗಲೇ ಅನೇಕ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿರುವುದಾಗಿ ಹೇಳಿದರು.

ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಣಕಾಸು ಮತ್ತು ಆಡಳಿತ ನಿರ್ದೇಶಕ ಅಬ್ದುರ್ರಹಿಮಾನ್ ಮಾತನಾಡಿ ,ರಾಜ್ಯ ಅಥವಾ ದೇಶದಲ್ಲೇ ಒಂದೇ ಪ್ರದೇಶದಲ್ಲಿ ಎಲ್ಲೂ ಸಿಗದಷ್ಟು ಸಂಖ್ಯೆಯ ಆಸ್ಪತ್ರೆಗಳು ದೇರಳಕಟ್ಟೆಯಲ್ಲಿ ಲಭ್ಯವಿದ್ದು ,ಎಲ್ಲಾ ಆಸ್ಪತ್ರೆಗಳಲ್ಲೂ ದಿನದ ಇಪ್ಪತ್ತನಾಲ್ಕು ಗಂಟೆಯೂ ರೋಗಿಗಳ ಸೇವೆಗೆ ವೈದ್ಯರು ಸಿಗುವುದೇ ಭಾಗ್ಯ . ಬಡ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸುವುದೇ ನನ್ನ ತಂದೆಯವರ ಬಹು ವರುಷಗಳ ಹಿಂದಿನ ಕನಸಾಗಿದ್ದು ,ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರು ಈ ವೈದ್ಯಕೀಯ ಶಿಬಿರಗಳನ್ನು ಸದುಪಯೋಗಪಡಿಸುವಂತೆ ಕರೆ ನೀಡಿದರು.

ಕೇಂದ್ರ ಜಮಾಅತ್ ಕಮಿಟಿ ಅಧ್ಯಕ್ಷ ಸಾಧು ಕುಂಙ ಮಾಸ್ತರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಖಾಜಾ ನಸೀರುಧ್ಧೀನ್ , ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ,ಜನಾಬ್ ಅಬ್ಬುಸಾಲಿ ,ಕಿನ್ಯಾ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯಾ , ಬಿಲ್ಲವ ಮುಖಂಡ ಮೋಹನ್ ಪೂಜಾರಿ , ಕುತುಬಿಯ್ಯಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾಬ್ ಮಹಮ್ಮದ್ , ಮುಂತಾದವರು ಉಪಸ್ಥಿತರಿದ್ದರು.

ಕುತುಬಿಯ್ಯಾ ಮದರಸದ ಮುಖ್ಯಸ್ಥ ಫಾರೂಕ್ ದಾರಿಮಿ ದುವಾ ನೆರವೇರಿಸಿದರು. ಫಾರೂಕ್ ಕಿನ್ಯಾ ಸ್ವಾಗತಿಸಿ ,ಅಬ್ಬುಸಾಲಿ ವಂದಿಸಿದರು. ಶುಭಕರ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Exit mobile version