ಉಳ್ಳಾಲ : ಪ್ರಾಕೃತಿಕ ವಿಕೋಪದಿಂದ ಪಿಲಾರು ಬಳಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿ ನಿವಾಸಿ ಕೇಶವ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಐದು ಲಕ್ಷ ರೂ ಪರಿಹಾರ ಧನ ಚೆಕ್ ಅನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ವಿತರಿಸಿದರು.
ಬಳಿಕ ಮಾತನಾಡಿದ ಅವರು ಈ ಬಾರಿಯ ಮಳೆಯಲ್ಲಿ ಉಳ್ಳಾಲ ತಾಲೂಕಿನಾದ್ಯಂತ ಕೃತಕ ನೆರೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದ್ದು, ಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದೇನೆ . ಮನೆಗೆ ನೀರು ನುಗ್ಗಿದರೆ ಕಂದಾಯ ಇಲಾಖೆ ಆರು ಸಾವಿರ ಪರಿಹಾರ ನೀಡುತ್ತದೆ. ಆದರೆ ಮನೆಯೊಳಗಿನ ಗೃಹೋಪಯೋಗಿ ವಸ್ತುಗಳ ನಷ್ಟ ಅಂದಾಜಿಸಿದರೆ ಈ ಪರಿಹಾರ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಕೃತಕ ನೆರೆಯಿಂದ ಜಲಾವೃತಗೊಂಡ ಮನೆಗಳಿಗೆ ನೀಡುವ ಪರಿಹಾರ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗೆ ಹೆಚ್ಚಿಸುವಂತೆ ಪತ್ರ ಬರೆದಿದ್ದೇನೆ. ಪ್ರಾಕೃತಿಕ ವಿಕೋಪದಿಂದ ಜಿವಹಾನಿಗೆ ರಾಜ್ಯ ಸರಕಾರ ಐದು ಲಕ್ಷ ರೂ ಪರಿಹಾರ ನೀಡಿದರೂ, ಜೀವ ಹಾನಿಯಾದ ಕುಟುಂಬಕ್ಕೆ ಆದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಈ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಯಾವುದೇ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪುಟ್ಟರಾಜು, ಕಾಂಗ್ರೆಸ್ ಮುಖಂಡರಾದ ದಿನೇಶ್ ಕುಂಪಲ, ವಿನೋದ್ ಕುಂಪಲ, ಶ್ರೀಧರ ಆಳ್ವ, ಜಲೀಲ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಸೋಮೇಶ್ವರ ಪುರಸಭಾ ಸದಸ್ಯರಾದ ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು.