ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಎಲ್ಯಾರ್‌ಪದವು ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ.) ಗ್ರಾಮಚಾವಡಿ ಕೊಣಾಜೆ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಹಾಗೂ ಮಹಿಳಾ ಸಂಘ(ರಿ.), ಅಂಬ್ಲಮೊಗರು, ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ಎಲ್ಯಾರ್‌ಪದವು, ಯುವ ಕ್ಯಾಥೋಲಿಕ್ ಸಂಚಲನ ಎಲ್ಯಾರ್‌ಪದವು, ಆದಿಮಾಯೆ ರಾಮ ದತ್ತಾಂಜನೇಯ ಭಜನಾ ಮಂದಿರ (ರಿ) ಎಲ್ಯಾರ್‌ಪದವು ಇವರ ಸಹಕಾರದೊಂದಿಗೆ ಶರೂನ್ ಸ್ಟ್ರಕ್ಚರ್ , ಹೋಲಿ ಕ್ರಾಸ್ ಚರ್ಚ್ ಬಳಿ ಎಲ್ಯಾರ್‌ಪದವು ಕೊಣಾಜೆ ಇಲ್ಲಿ ದಿನಾಂಕ 13.07.2025ರ ಭಾನುವಾರದಂದು ಜರುಗಿತು.
ಈ ಕಾರ್ಯಕ್ರಮವನ್ನು ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವೈದ್ಯರಾದ ಡಾ| ರಾಘವೇಂದ್ರ ರವರು ಉದ್ಘಾಟಿಸಿ , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಕಣಚೂರು ಆಸ್ಪತ್ರೆಯು ಹಲವಾರು ಉಚಿತ ಶಿಬಿರಗಳನ್ನು ಆಯೋಜನೆ ಮಾಡಿದ್ದು, ಈ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಉಚಿತ ಔಷಧಿ ವಿತರಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತçಚಿಕಿತ್ಸೆಯನ್ನು ಮಾಡಲಾಗುವುದಲ್ಲದೇ ಈ ಶಿಬಿರದಲ್ಲಿ ಅನೇಕ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷರಾದ ರವೀಂದ್ರ ಬಂಗೇರ ಇವರು ಮಾತಾನಾಡಿ, ರೋಗ ಬಂದಿರುವವರು ಮಾತ್ರ ಚಿಕಿತ್ಸೆ ಪಡೆಯುವುದಲ್ಲದೇ, ರೋಗ ಬರುವ ಮುಂಚಿತವಾಗಿ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಅತ್ಯಗತ್ಯ ಎಂದರು.
ಹೋಲಿ ಕ್ರಾಸ್ ಚರ್ಚ್ ಎಲ್ಯಾರ್ ಪದವು ಇದರ ಉಪಾಧ್ಯಕ್ಷರಾದ ಎವರೆಸ್ಟ್ ಜೋನ್ ರೋಚ್ ರವರು ಮಾತನಾಡಿ, ಕೆಲಸದ ಒತ್ತಡ ಹಾಗೂ ದೈನಂದಿನ ಕಾರ್ಯಚಟುವಟಿಕೆಗಳಿಂದ ನಮ್ಮ ಆರೋಗ್ಯದತ್ತ ಗಮನ ಹರಿಸಲು ಸಾಧ್ಯವಾಗದ ಕಾರಣ ಜೀವನದ ಆರೋಗ್ಯದ ಮೇಲೆ ವ್ಯತಿರುಕ್ತ ಪರಿಣಾಮ ಬೀರುತ್ತದೆ. ಇಂತಹ ಶಿಬಿರಗಳಲ್ಲಿ ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಆರೋಗ್ಯ ತಪಾಸಣೆ ಮಾಡಿದರೆ ಉತ್ತಮ ಜೀವನ ಶೈಲಿ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಯು ತನ್ನ ಎಲ್ಲಾ ಶಾಖೆಗಳ ವಾರ್ಷಿಕೋತ್ಸವದಂದು ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಹಾಗೂ ಶಾಖೆಯ ಮಾಲಕರಾದ ರೋನಾಲ್ಡ್ ಜೆ ಅಮ್ಮಣ್ಣ ಇವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಹಣಕಾಸು ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಆರೋಗ್ಯದ ಕಾಳಜಿ ವಹಿಸಿ ಎಲ್ಲಾ ಶಾಖೆಗಳಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸುತ್ತಿರುವುದಕ್ಕೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ‘ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಸಂಘವು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರವನ್ನು ನೀಡಿದೆ. ಅದೇ ರೀತಿ ಇಂತಹ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆ ನಾಟೆಕಲ್ ಮಂಗಳೂರು ಇದರ ಆಡಳಿತ ವರ್ಗ, ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಸಂಘದಲ್ಲಿ ಬ್ಯಾಂಕ್‌ಗಳಿಗೆ ನೇರವಾಗಿ ಹಣ ವರ್ಗಾವಣೆ, ಮಣಿಪಾಲ್ ಆರೋಗ್ಯ ಕಾರ್ಡ್ನ ಹೊಸ ಹಾಗೂ ನವೀಕರಣ ಸೌಲಭ್ಯ ,ಆರೋಗ್ಯ ಹಾಗೂ ವಾಹನ ವಿಮಾ ಸೌಲಭ್ಯ ಮತ್ತು ಚಿನ್ನಾಭರಣ ಸಾಲಕ್ಕೆ ಪ್ರತಿ ಗ್ರಾಂಗೆ ರೂ.8೦೦೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಗರಿಷ್ಟ ಮೌಲ್ಯದಲ್ಲಿ ಶೀಘ್ರಗತಿಯಲ್ಲಿ ಸಾಲ ಸೌಲಭ್ಯ ನೀಡುವುದಲ್ಲದೇ ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟಿರುವ ಚಿನ್ನಾಭರಣಗಳನ್ನು ಬಿಡಿಸಿ ನಮ್ಮಲ್ಲಿ ಅಡವಿಡುವ ಸೌಲಭ್ಯ ಕೂಡ ಲಭ್ಯವಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ. ನಿರ್ದೇಶಕರಾದ ಗೋಪಾಲ್ ಎಮ್., ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಅಂಬ್ಲಮೊಗರು ಇದರ ಅಧ್ಯಕ್ಷರಾದ ದೀಪಕ್ ಪೂಜಾರಿ, ಆದಿಮಾಯೆ ರಾಮ ದತ್ತಾಂಜನೇಯ ಭಜನಾ ಮಂದಿರ (ರಿ) ಎಲ್ಯಾರ್‌ಪದವು ಇದರ ಅಧ್ಯಕ್ಷರಾದ ಚಂದ್ರಹಾಸ್ ನಾಯ್ಕ್, ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ಎಲ್ಯಾರ್ ಪದವು ಇದರ ಅಧ್ಯಕ್ಷರಾದ ಪ್ರೇಮ್ ರೋಚ್ , ಕ್ಯಾಥೋಲಿಕ್ ಯುವ ಸಂಚಲನ ಎಲ್ಯಾರ್ ಪದವು ಇದರ ಅಧ್ಯಕ್ಷರಾದ ಕು. ದೀಪಾ ಡಿಸೋಜ , ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆ ನಾಟೆಕಲ್ ಇಲ್ಲಿನ ಪಿ.ಆರ್.ಓ ಆದ ರಶೀದ್ ಮತ್ತು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 2೦೦ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಔಷಧಿ ವಿತರಣೆ, ಹಾಗೂ ನೇತ್ರ ತಪಾಸಣೆಯನ್ನು ನಡೆಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ರವಿಕಲಾ ವಿಶ್ವನಾಥ್ ಸ್ವಾಗತಿಸಿ, ಸಿಬ್ಬಂದಿ ಕವಿತಾ ಶೋಷಿತ್ ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಶಾಖಾಧಿಕಾರಿಯಾದ ಸೌಮ್ಯಲತಾ ನಿರ್ವಹಿಸಿದರು.
